ಗುತ್ತಲದ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯ ಎದುರು ಮೀನು ಹಾಗೂ ಮಾಂಸದ ಅಂಗಡಿ ತೆರವುಗೊಳಿಸುವಂತೆ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಶರಣಮ್ಮ ಕಾರಿ, ಪ್ರದೀಪ ಸಾಲಗೇರಿ, ಚನ್ನಪ್ಪ ಬನ್ನಿಮಟ್ಟಿ ಇತರರಿದ್ದರು. 
ಹಾವೇರಿ

ಮೀನು, ಮಾಂಸದಂಗಡಿ ತೆರವಿಗೆ ಆಗ್ರಹ

ವೀರೇಶ ಸೌದ್ರಿ
ಗುತ್ತಲ: ಪಟ್ಟಣದ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯ ಎದುರು ಮೀನು ಹಾಗೂ ಮಾಂಸದ ಅಂಗಡಿಗಳಿಂದ ದುರ್ವಾಸನೆ ಹಾಗೂ ನಾಯಿಗಳ ಕಾಟದಿಂದ ಶಾಲಾ ಮಕ್ಕಳಿಗೆ ಹಾಗೂ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಮುಕ್ತಿಗೊಳಿಸುವಂತೆ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಾರ್ವಜನಿಕರು ಸೋಮವಾರ ಮನವಿ ಸಲ್ಲಿಸಿದರು. 
ಪಟ್ಟಣದ ಹಳೆಯ ಪಪಂ ಕಾರ್ಯಾಲಯದಲ್ಲಿ ನೂತನ ನಾಡಕಚೇರಿ ಉದ್ಘಾಟಿಸಿದ ನಂತರ ಸಾರ್ವಜನಿಕರು ಮೀನು ಹಾಗೂ ಮಾಂಸದ ಅಂಗಡಿಗಳಿಂದ ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು. ಅಲ್ಲದೆ, ಶಾಲೆಯ ಆವರಣದಲ್ಲಿ ನಾಯಿಗಳು ಮಾಂಸದ ತ್ಯಾಜ್ಯಗಳನ್ನು ತಂದು ತಿನ್ನುತ್ತಿದ್ದು, ಮಕ್ಕಳಿಗೆ ಕಚ್ಚಿದ ಪ್ರಕರಣಗಳಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 
ಈ ಸಂದರ್ಭದಲ್ಲಿ ಅಲ್ಲಿನ ಅನೇಕ ನಿವಾಸಿಗಳು ಮೀನು ಹಾಗೂ ಮಾಂಸದ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಆಗ ಪ್ರತಿಕ್ರಿಯಿಸಿದ  ರುದ್ರಪ್ಪ ಲಮಾಣಿ, ಪಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಅಂಗಡಿಗಳನ್ನು ಸ್ಥಳಾಂತರಿಸುವುದಾಗಿ  ಭರವಸೆ ನೀಡಿದರು.
ತಹಸೀಲ್ದಾರ್ ಶರಣಮ್ಮ ಕಾರಿ, ಉಪ ತಹಸೀಲ್ದಾತರ್ ಚಿದಾನಂದ ಗೊಣಸಗಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಪಪಂ ನಾಮ ನಿರ್ದೇಶಿತ ಸದಸ್ಯರಾದ ಪಿ.ಎನ್. ಹೇಮಗಿರಿಮಠ, ನಿಂಗಪ್ಪ ನಾಯಕ, ಚನ್ನಪ್ಪ ಕಲಾಲ, ಪಿಕೆಪಿಎಸ್ ಅಧ್ಯಕ್ಷ ಚನ್ನಪ್ಪ ಬನ್ನಿಮಟ್ಟಿ, ನಿರ್ದೇಶಕ ಶಿವಾನಂದ ಕೆಂಚಮಲ್ಲ, ಮಾಜಿ ಅಧ್ಯಕ್ಷ ಮಾಲತೇಶ ಬನ್ನಿಮಟ್ಟಿ ಸೇರಿದಂತೆ ಅನೇಕರಿದ್ದರು.

ಮಟ್ಕಾ ಬರೆಯುತ್ತಿದ್ದವನ ಬಂಧನ

ಮೀನು ಹಾಗೂ ಮಾಂಸದ ಅಂಗಡಿಗಳ ಪರಿಶೀಲನೆಗೆ ಮುಂದಾದ ಶಾಸಕ ರುದ್ರಪ್ಪ ಲಮಾಣಿಗೆ ವ್ಯಕ್ತಿಯೊಬ್ಬ, ‘ಅದೇ ಆವರಣದಲ್ಲಿನ ಕೊಠಡಿಯೊಂದರಲ್ಲಿ ಮಟ್ಕಾ ಬರೆಯುತ್ತಾರೆ. ಮದ್ಯ ಕುಡಿದು ಅಲ್ಲಿಯೇ ಬಾಟಲಿ ಎಸೆಯುತ್ತಾರೆ. ಇದರಿಂದ ಕುಟುಂಬಸ್ಥರು ಇಲ್ಲಿ ಸಂಚರಿಸುವುದೇ ದುಸ್ತರವಾಗಿದೆ’ ಎಂದು ದೂರಿದರು. ತಕ್ಷಣ ಕೊಠಡಿಯೊಳಗೆ ತೆರಳದ ಶಾಸಕರು, ಅಲ್ಲಿ ರಾಜಾರೋಷವಾಗಿ ಮಟ್ಕಾ ಅಂಕಿ ಬರೆಯುತ್ತಿದ್ದ ವ್ಯಕ್ತಿಯನ್ನು ಕಂಡು ಅಚ್ಚರಿಗೊಂಡರು. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಟ್ಕಾ ಬರೆಯುತ್ತಿದ್ದವನ ಮೇಲೆ ಕ್ರಮ ಜರುಗಿಸಬೇಕೆಂದು ಸೂಚಿಸಿದರು. ಕೆಲವೇ ಕ್ಷಣಗಳಲ್ಲಿ ಠಾಣೆಯಿಂದ ಆಗಮಿಸಿದ ಪೊಲೀಸರು ಮಟ್ಕಾ ಬರೆಯುತ್ತಿದ್ದವನನ್ನು ಸಾಮಗ್ರಿಗಳೊಂದಿಗೆ ದಸ್ತಗಿರಿ ಮಾಡಿದರು.