ಅಡಕೆಯ ಬೆಳೆ ವಿಮೆ ಪರಿಹಾರ Areca insurance ಬಿಡುಗಡೆಗೆ ಹಾನಗಲ್ಲ ಪಟ್ಟಣದಲ್ಲಿ ತಹಸೀಲ್ದಾರ್ ಎಸ್. ರೇಣುಕಾ ಅವರಿಗೆ ರೈತ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು. 
ಹಾವೇರಿ

Areca insurance ಅಡಕೆ ವಿಮೆ, ಬೆಳೆ ಹಾನಿ ಪರಿಹಾರ ಪಾವತಿಗೆ ಒತ್ತಾಯ

ಹಾನಗಲ್ಲ: ಅಡಕೆಯ ಬೆಳೆ ವಿಮೆ ಪರಿಹಾರ Areca insurance  ಬಿಡುಗಡೆಯಾಗದಿರುವುದು ಹಾಗೂ ಬೆಳೆ ಹಾನಿ ಪರಿಹಾರ ವಿತರಿಸದಿರುವುದನ್ನು ಖಂಡಿಸಿ ರೈತ ಸಂಘದಿಂದ ಪಟ್ಟಣದಲ್ಲಿ ತಹಸೀಲ್ದಾರ್ ಎಸ್.ರೇಣುಕಾ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
2024-25ನೇ ಸಾಲಿನ ಅಡಕೆ ಹವಾಮಾನ ಆಧಾರಿತ ಬೆಳೆ ವಿಮೆ ತಾಲೂಕಿನ 39 ಗ್ರಾಪಂಗಳಿಗೆ ಬಿಡುಗಡೆಯಾಗಿದೆ. ಆದರೆ, ಶಿರಗೋಡ, ಅರಳೇಶ್ವರ ಗ್ರಾಪಂ ಹಾಗೂ ಹಾನಗಲ್ಲ ಪಟ್ಟಣದ ಹಳೇಕೋಟಿ ವಿಮಾ ಘಟಕ ವ್ಯಾಪ್ತಿಯ ರೈತರಿಗೆ ಬಿಡುಗಡೆಯಾಗಿಲ್ಲ. ಈಗಾಗಲೇ ಟಮರ್್​ಶೀಟ್​ನ ಅವಧಿ ಮುಗಿದು 6 ತಿಂಗಳು ಕಳೆದಿವೆ. ಕೂಡಲೇ ವಿಮಾ ಪರಿಹಾರ ನೀಡಬೇಕಿತ್ತು.
ವಿಮಾ ಕಂತು ಪಾವತಿಗೆ ಅಂತಿಮ ದಿನಾಂಕ ನಿಗದಿಪಡಿಸಿದಂತೆ ಪರಿಹಾರ ಬಿಡುಗಡೆಗೂ ವಿಮಾ ಕಂಪನಿಗಳಿಗೆ ದಿನಾಂಕ ನಿಗದಿಪಡಿಸಬೇಕು. ವಿಳಂಬ ಅವಧಿಗೆ ವಿಮಾ ಮೊತ್ತಕ್ಕೆ ಬಡ್ಡಿ ಸೇರಿಸಿ ನೀಡಬೇಕು. 39 ಗ್ರಾಪಂಗಳ ವ್ಯಾಪ್ತಿಯಲ್ಲೂ ವಿಮಾ ಹಣ ಜಮೆಯಲ್ಲಿ ವಿಳಂಬವಾಗಿದ್ದು, ತಾಲೂಕಿನಾದ್ಯಂತ ಎಲ್ಲ ರೈತರಿಗೂ ಬಡ್ಡಿ ಹಣವನ್ನು ವಿಮಾ ಕಂಪನಿ ಬಿಡುಗಡೆಗೊಳಿಸಬೇಕು ಎಂದು ರೈತರು ಮನವಿಯಲ್ಲಿ ಆಗ್ರಹಿಸಿದ್ದಾರೆ.
2023-24ನೇ ಸಾಲಿನ ಬೆಳೆ ವಿಮೆ ಹಣ ಬೆಳೆ ಸಮೀಕ್ಷೆ ಮಾಹಿತಿಗೆ ಹೊಂದಾಣಿಕೆಯಾಗದ (ಮಿಸ್​ವ್ಯಾಚ್) ಕಾರಣದಿಂದಾಗಿ ಬಿಡುಗಡೆಗೊಂಡಿಲ್ಲ. ಮೆಣಸಿನಕಾಯಿ ಬೆಳೆದ 101 ರೈತರಿಗೆ, ಮಾವು ಬೆಳೆದ 155 ರೈತರು, ಶುಂಠಿ ಬೆಳೆದ 186 ರೈತರು, ಅಡಕೆಯ 272 ರೈತರಿಗೆ ಇದುವರೆಗೂ ಪರಿಹಾರ ಜಮಾ ಆಗಿಲ್ಲ. ತಾಂತ್ರಿಕ ದೋಷ ಸರಿಪಡಿಸಿ, ಈ ರೈತರಿಗೆ ಕೂಡಲೇ ಪರಿಹಾರ ಹಣ ಜಮೆಗೆ ಕ್ರಮ ಕೈಗೊಳ್ಳಬೇಕು.
ತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಮಾವು ಬೆಳೆಗೆ ಕಂತು ಪಾವತಿಸಿ ವಿಮಾ ನೋಂದಣಿ ಮಾಡಿದ 3496 ರೈತರ 2684 ಹೆಕ್ಟೇರ್ ಪ್ರದೇಶಕ್ಕೆ ಇದುವರೆಗೂ ಪರಿಹಾರ ಬಿಡುಗಡೆಯಾಗಿಲ್ಲ. ಕೂಡಲೇ ಪರಿಹಾರ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ನಗರ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ, ತಾಲೂಕು ಕಾರ್ಯದರ್ಶಿ ವಾಸುದೇವ ಕಮಾಟಿ, ರುದ್ರಪ್ಪ ಹಣ್ಣಿ, ಗಿರಿಧರಸ್ವಾಮಿ ಹಿರೇಮಠ, ಹನುಮಂತ ಬಾಳೂರ ಇತರರಿದ್ದರು.