ಕಬ್ಬಿಗೆ 5,500 ರೂ. ಬೆಲೆಗೆ ನಿಗದಿಗೆ ಆಗ್ರಹ ಬಂಕಾಪುರ ಟೋಲ್ಗೇಟ್ನಲ್ಲಿ ಧರಣಿ
ರಾತ್ರಿಯಿಡೀ ಹೆದ್ದಾರಿಯಲ್ಲೇ ಅಡುಗೆ, ಭಜನೆ ಮಾಡುತ್ತ ಕುಳಿತ ರೈತರು
ಟೋಲ್ಗೇಟ್ ಬಂದ್ನಿಂದ 30 ಲಕ್ಷ ರೂ. ನಷ್ಟ
ಹಾವೇರಿ: ಪ್ರತಿ ಟನ್ಗೆ ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಜಿಲ್ಲೆಯ ಬಂಕಾಪುರ ಟೋಲ್ಗೇಟ್ ಬಳಿ ರೈತರು ನಡೆಸುತ್ತಿರುವ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆ ಈಡೇರುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಮುಂದುವರಿದಿದೆ.
ಮಂಗಳವಾರ ರಾತ್ರಿ ರೈತರು ಹೆದ್ದಾರಿಯಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡಿ, ಬಳಿಕ ರಾತ್ರಿಯಿಡೀ ಭಜನೆ ನಡೆಸುತ್ತ ಧರಣಿ ಮುಂದುವರಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿ ಧರಣಿ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸುವ ಕುರಿತು ಸ್ಪಷ್ಟ ಭರವಸೆ ಸಿಗದ ಹಿನ್ನೆಲೆಯಲ್ಲಿ ರೈತರು ಧರಣಿ ಮುಂದುವರಿಸಿದರು.
ಬಂಕಾಪುರ ಟೋಲ್ಗೇಟ್ ಸಂಪೂರ್ಣ ಬಂದ್ ಮಾಡಿರುವ ಪರಿಣಾಮ ಟೋಲ್ ಸಂಗ್ರಹ ಸ್ಥಗಿತಗೊಂಡಿದ್ದು, ಒಂದೇ ದಿನದಲ್ಲಿ ಸುಮಾರು 30 ಲಕ್ಷ ರೂ. ನಷ್ಟವಾಗಿದೆ ಎಂದು ಟೋಲ್ ಸಿಬ್ಬಂದಿ ತಿಳಿಸಿದ್ದಾರೆ. ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ತೀವ್ರ ಅಡಚಣೆಯಾಗಿದ್ದು, ಬೆಂಗಳೂರು–ಹುಬ್ಬಳ್ಳಿ ಮಾರ್ಗದ ವಾಹನಗಳಿಗೆ ಸವಣೂರು ಹಾಗೂ ಹಾನಗಲ್ಲ ಮಾರ್ಗವಾಗಿ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ೧೦ ಎಕರೆ ಕಬ್ಬು ಹಾನಿ
ಕಬ್ಬು ಬೆಳೆದು ನಿಂತಿದ್ದು, ಸಕ್ಕರೆ ಕಾರ್ಖಾನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದ್ದಾರೆ.
ಕಬ್ಬು ಬೆಳೆಯಲು ಬೀಜ, ಗೊಬ್ಬರ, ಕಾರ್ಮಿಕರು ಸೇರಿದಂತೆ ವಿವಿಧ ವಿಚಾರಕ್ಕೆ ಹಣ ಖರ್ಚಾಗುತ್ತಿದೆ. ಇಷ್ಟೆಲ್ಲ ವೆಚ್ಚ ಮಾಡಿದರೂ ಸಹ ನಮಗೆ ನಿರೀಕ್ಷತ ಬೆಲೆ ಸಿಗದೆ ಇದ್ದಾಗ ಕಬ್ಬಿನ ಕೃಷಿ ಮಾಡುವುದು ಹೇಗೆ. ಇದನ್ನೇ ಮುಂದುವರೆಸುವುದು ಹೇಗೆ ಎಂದು ರೈತರು ಗೋಳಾಡಿದರು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಪ್ರತಿ ಟನ್ ಕಬ್ಬಿಗೆ ಐದು ಸಾವಿರ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸುವವರೆಗೂ ನಾವು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೋರಾಟ ಮುಂದುವರೆಸುತ್ತೇವೆ. ಕಬ್ಬಿಗೆ ನಿಗದಿತ ಬೆಲೆ ಘೋಷಿಸುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು, (ಏಜೆನ್ಸೀಸ್).