ಬ್ಯಾಡಗಿಯ ಮಾರುಕಟ್ಟೆಯಲ್ಲಿ ಟೆಂಡರ್ಗೆ ಇಟ್ಟಿರುವ ಮೆಣಸಿನಕಾಯಿ byadagi dabbi chiliesಚೀಲಗಳು.
ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಡಬ್ಬಿ ತಳಿಗೆ (byadagi Dabbi chilies) ಭಾರಿ ಬೇಡಿಕೆ ಬಂದಿದ್ದು, ದರ ಕ್ವಿಂಟಾಲ್ಗೆ 62 ಸಾವಿರ ರೂಪಾಯಿ ದಾಟಿದೆ.
ಮಾರುಕಟ್ಟೆಗೆ ರೈತರು ತರುತ್ತಿರುವ ಹೊಸ ಮೆಣಸಿನಕಾಯಿಗೆ ಬೇಡಿಕೆ ಉತ್ತಮವಾಗಿದೆ. ಆದರೆ, ಸ್ವಲ್ಪ ಪ್ರಮಾಣದಲ್ಲಿ ಆವಕವಾಗುತ್ತಿದೆ. ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಶೀತಲೀಕರಣ ಘಟಕದಲ್ಲಿನ ಚೀಲಗಳ ವ್ಯಾಪಾರ ನಡೆದಿದೆ. ವಾರದಿಂದ ವಾರಕ್ಕೆ ಮೆಣಸಿನಕಾಯಿ ಆವಕ ಹಾಗೂ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಎರಡು ವರ್ಷದ ಹಿಂದೆ ಕ್ವಿಂಟಾಲ್ ಮೆಣಸಿನಕಾಯಿ ದರ 75 ಸಾವಿರ ರೂಪಾಯಿ ಮೀರಿ ಮಾರಾಟವಾಗುವ ಮೂಲಕ ದಾಖಲೆ ನಿರ್ವಿುಸಿತ್ತು. ನಂತರ ಮೆಣಸಿನಕಾಯಿ ಬೆಲೆ ಇಳಿಮುಖವಾಗಿ ರೈತರು ತುಸು ಬೇಸರದಲ್ಲಿದ್ದರು. ಇದೀಗ ದರ ಏರಿಕೆ ಆಗುತ್ತಿರುವುದರಿಂದ ಅವರ ಮೊಗದಲ್ಲಿ ಸಂತಸ ಕಾಣುತ್ತಿದೆ. ಹಿಂದಿನಗಿಂತಲೂ ಎಲ್ಲೆಡೆ ವಹಿವಾಟು ಚೇತರಿಕೆ ಕಾಣುತ್ತಿದೆ.
32ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್ಗಳಿರುವ ಪರಿಣಾಮ 12 ತಿಂಗಳು ವ್ಯಾಪಾರ ನಡೆದಿದೆ. ಗುರುವಾರ, ಸೋಮವಾರ ಆನ್ಲೈನ್ ಟೆಂಡರ್ ನಡೆಯುತ್ತಿದೆ.
ಎರಡು ತಿಂಗಳ ಹಿಂದೆ ಡಬ್ಬಿತಳಿಗೆ 15 ರಿಂದ 30 ಸಾವಿರ ರೂ. ದರ ಲಭಿಸಿತ್ತು. ಎರಡು ವಾರದಿಂದ 50-60 ಸಾವಿರ ರೂಪಾಯಿಗೆ ತಲುಪಿದೆ. ನ. 24 ರಂದು ಕ್ವಿಂಟಾಲ್ಗೆ ಗರಿಷ್ಠ ಬೆಲೆ 56,729 ರೂ. ಸಿಕ್ಕಿತ್ತು. ನ. 25ರಂದು 41200 ರೂಪಾಯಿಗೆ ಇಳಿಕೆಯಾಗಿತ್ತು.
ಗುರುವಾರ (ನ.27) 15 ಚೀಲಗಳ ಲಾಟ್ನ ಮೆಣಸಿನಕಾಯಿ ಕ್ವಿಂಟಾಲ್ಗೆ 62,159 ರೂ.ನಂತೆ ಮಾರಾಟವಾಗಿದೆ. ಇದು ಪ್ರಸಕ್ತ ಸಾಲಿನ ಹೆಚ್ಚಿನ ದರ ಎನ್ನಲಾಗಿದೆ. ಕಡ್ಡಿ ತಳಿಗೆ ಕನಿಷ್ಠ 30ರಿಂದ ಗರಿಷ್ಠ 45 ಸಾವಿರ ರೂ.ನಂತೆ ವಹಿವಾಟು ನಡೆದಿದ್ದು, ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ನ. 27ರ ಟೆಂಡರ್ ದರ: ಗುರುವಾರ ಮಾರುಕಟ್ಟೆಗೆ 14054 ಚೀಲಗಳು ಆವಕಗೊಂಡಿವೆ. ಕಡ್ಡಿ 3509ರಿಂದ 45,489 ರೂಪಾಯಿ, ಡಬ್ಬಿ ತಳಿ 4009 ರಿಂದ 62,159 ರೂಪಾಯಿ ಹಾಗೂ ಗುಂಟೂರು ಕಾಯಿ 1289ರಿಂದ 15,859 ರೂ.ನಂತೆ ಮಾರಾಟವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.