ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ pond
ಶಿಗ್ಗಾಂವಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನ ಪ್ರೇರಣೆಯಾಗಿಸಿಕೊಂಡು ಭಾರತ ಸೇವಾ ಸಂಸ್ಥೆ ವತಿಯಿಂದ ಕೆರೆಗಳ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನೆವರಿ ಕೊನೆಯ ವಾರದಿಂದ ಮೂರು ತಿಂಗಳ ಕಾಲ ತಾಲೂಕಿನಲ್ಲಿರುವ ಪ್ರಮುಖ ಕೆರೆಗಳ ಹೂಳೆತ್ತಲಾಗುವುದು. ಅಂತರ್ಜಲಮಟ್ಟ ಸುಧಾರಣೆ, ಕೆರೆಗಳ ನೀರಿನ ಸಂಗ್ರಹ ಮಟ್ಟವನ್ನು ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಹೊಸ ಕೆರೆ ನಿರ್ಮಾಣ ಕಷ್ಟಕರ. ಹೀಗಾಗಿ ಇರುವ ಕೆರೆಗಳನ್ನು ಪುನಶ್ಚೇತನಗೊಳಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ತಾಲೂಕಿನ ನಾಲ್ಕು ಹಾಗೂ ಸವಣೂರ ತಾಲೂಕಿನ ಎರಡು ಜಿಲ್ಲಾ ಪಂಚಾಯಿತಿಯ ಪ್ರಮುಖ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಸಂಸ್ಥೆಯಿಂದ ಉಚಿತವಾಗಿ ಹೂಳೆತ್ತಲಾಗುವುದು. ಈ ಭಾಗದ ಮಠಾಧೀಶರು, ಸಂಸದರು, ಕೇಂದ್ರ ಸಚಿವರು, ಶಾಸಕರು ಸೇರಿದಂತೆ ವಿವಿಧ ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಗುವುದು ಎಂದರು.
2016ರಲ್ಲಿ ಭೀಕರ ಬರಗಾಲದ ಸಮಯದಲ್ಲಿ ಭಾರತ ಸೇವಾ ಸಂಸ್ಥೆ ಕೆರೆಗಳ ಹೂಳೆತ್ತುವ ಕೆಲಸವನ್ನು ಪ್ರಾರಂಭ ಮಾಡಿ, ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಟ್ಯಾಂಕರ್ ಮೂಲಕ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ಸಾಮೂಹಿಕ ಮದುವೆ ಸೇರಿದಂತೆ ರೈತರ, ಬಡವರ ಶ್ರೇಯೋಭಿವೃದ್ಧಿಗಾಗಿ ಹಲವಾರು ಜನಪರ ಕಾರ್ಯಗಳನ್ನು ಸಂಸ್ಥೆಯಿಂದ ನಿರಂತರವಾಗಿ ಮಾಡಲಾಗುತ್ತದೆ ಎಂದರು.
ಕೆರೆಯ ಫಲವತ್ತಾದ ಮಣ್ಣನ್ನು ರೈತರು ಹೊಲಗಳಿಗೆ ಬಳಸುವುದರ ಮೂಲಕ ಕೃಷಿಭೂಮಿಯನ್ನು ಹೆಚ್ಚು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.