ಮೃತಪಟ್ಟ ವಿದ್ಯಾರ್ಥಿ ರಾಹುಲ್ ಶೆಟ್ಟಣ್ಣನವರ ಶವ ಹುಡುಕಾಟದಲ್ಲಿ ತೊಡಗಿರುವ ಅಗ್ನಿಶಾಮಕದಳ ಸಿಬ್ಬಂದಿ 
ಹಾವೇರಿ

ಇನ್ನೂ ಪತ್ತೆಯಾಗಿಲ್ಲ ವಿದ್ಯಾರ್ಥಿ ದೇಹ

ವೀರೇಶ ಸೌದ್ರಿ
ಬ್ಯಾಡಗಿ: ಈಜಲು ಹೋಗಿ ಕೆರೆಯಲ್ಲಿ ಭಾನುವಾರ ಮುಳುಗಿ ಮೃತಪಟ್ಟ ವಿದ್ಯಾರ್ಥಿಯ ಶವ ಸೋಮವಾರವೂ ಪತ್ತೆಯಾಗಿಲ್ಲ. ಸುಮಾರು 8 ತಾಸು ಹುಡುಕಾಟ ನಡೆಸಿದ ಆಗ್ನಿಶಾಮಕದಳ ಹಾಗೂ ಮುಳುಗು ತಜ್ಞರ ತಂಡ ಬರಿಗೈಲಿ ವಾಪಸಾಗಿದೆ.
ಪಟ್ಟಣದ ಬೆಟ್ಟದ ಮಲ್ಲೇಶ್ವರ ಪ್ರದೇಶದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿ ರಾಹುಲ್ ಶೆಟ್ಟೆಣ್ಣನವರ (17) ಮೃತಪಟ್ಟ ವಿದ್ಯಾರ್ಥಿ. ಹಾಸ್ಟೆಲ್ ಮೇಲ್ವಿಚಾರಕರ ಪತ್ನಿಯ ಹೆರಿಗಾಗಿ ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಶನಿವಾರ ಕರ್ತವ್ಯ ಮುಗಿಸಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ. ಬಳಿಕ ವಸತಿ ನಿಲಯದ ನಿರ್ವಹಣೆಗೆ ಯಾರನ್ನು ನಿಯೋಜಿಸಲಾಗಿತ್ತು ಎಂಬುದು ತಿಳಿದಿಲ್ಲ. 
ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರು 15 ದಿನಗಳಿಂದ ರಜೆ ಮೇಲೆ, ಗ್ರೇಡ್-2 ಅಧಿಕಾರಿಯನ್ನು ಹಾವೇರಿಯಿಂದ ಬ್ಯಾಡಗಿಗೆ ನಿಯೋಜಿಸಲಾಗಿದೆ. ಇಬ್ಬರು ಮೇಲ್ವಿಚಾರಕರನ್ನು ಎರಡು ನಿಲಯಕ್ಕೆ ನಿಯೋಜಿಸಲಾಗಿದೆ. 
  ಪಾಲಕರ ಆಕ್ರಂದನ 
ವಿದ್ಯಾರ್ಥಿ ಪಾಲಕರು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಮಗನ ಸಾವಿನ ಸುದ್ದಿಯಿಂದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳಿಗೆ ಶಿಕ್ಷಣ ಕೊಡಿಸುವ ಉದ್ದೇಶದಿಂದ ಇಲ್ಲಿ ಬಿಟ್ಟಿದ್ದರು. ಆದರೆ ವಿಧಿಯಾಟ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಮೃತನ ಅಣ್ಣನೊಬ್ಬ ಇದೇ ವಸತಿ ನಿಲಯದಲ್ಲಿದ್ದಾನೆ.