ಹಾನಗಲ್ಲಿನಲ್ಲಿ ವಿರಾಟ ಹಿಂದೂ ಮಹಾಗಣಪತಿ ಸಂಘಟನೆ ಏರ್ಪಡಿಸಿದ್ದ ಧರ್ಮಸಭೆಯನ್ನು ಶ್ರೀಗುರುಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿದರು. ಶ್ರೀಕಾಂತ ಹೊಸಕೇರಿ, ಸಿದ್ದಲಿಂಗಣ್ಣ ಕಮಡೊಳ್ಳಿ, ನಾಗಪ್ಪ ಸವದತ್ತಿ, ಗಿರೀಶ ದೇಶಪಾಂಡೆ ಇದ್ದರು. 
ಹಾವೇರಿ

ಹಬ್ಬಕ್ಕೆ ನಿರ್ಬಂಧ ಹೇರಿದರೆ ಡಿಸಿ ಕಚೇರಿಗೆ ಬೀಗ

ಧರ್ಮಸಭೆಯಲ್ಲಿ ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮೀಜಿ ಎಚ್ಚರಿಕೆ

ಹಾನಗಲ್ಲ: ಹಿಂದೂ ಹಬ್ಬಗಳು ಬಂದಾಗಲೆಲ್ಲ ಆಚರಣೆಗೆ ಒಂದಲ್ಲ ಒಂದು ರೀತಿ ನಿರ್ಬಂಧ ಹೇರುವ ಅಧಿಕಾರಿಗಳ ಹಿಂದೆ ನಿಂತು ಕೆಲಸ ಮಾಡುವವರು ಯಾರು ಎಂಬ ಪ್ರಶ್ನೆ ಹಿಂದುಗಳನ್ನು ಕಾಡುತ್ತಿದೆ. ನಿರ್ಬಂಧ ಖಂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಕಿಡಿಕಾರಿದರು.

ಐತಿಹಾಸಿಕ ತಾರಕೇಶ್ವರ ಮಂದಿರದ ಬಯಲಿನಲ್ಲಿ ವಿರಾಟ ಹಿಂದೂ ಮಹಾಗಣಪತಿ ಸಂಘಟನೆ ಭಾನುವಾರ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅನ್ಯ ಧರ್ಮವನ್ನು ಗೌರವಿಸುವ ಸೌಜನ್ಯ ಹಿಂದೂಗಳದು. ಆದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಸಂಗತಿಗಳು ಮಾತ್ರ ನಿರಂತರ ನಡೆಯುತ್ತವೆ. ನಮ್ಮ ಆಚರಣೆಗಳಿಗೆ ಧಕ್ಕೆ ಬಂದರೂ ಸಹನೆ ತೋರಿಸಬೇಕಂತೆ. ಆದರೆ ನಮ್ಮ ಭಾವನೆಗಳಿಗೆ ಧಕ್ಕೆ ಮಾಡುವ ಘಟನೆಗಳಿಗೆ ಮಾತ್ರ ಸರ್ಕಾರಗಳಲ್ಲಿ ಕ್ರಮಗಳಿಲ್ಲ. ಇಡೀ ಜಗತ್ತಿಗೆ ಮಠಾಧೀಶರನ್ನು ನೀಡುವ ವಿಶ್ವವಿದ್ಯಾಲಯವನ್ನೇ ಆರಂಭಿಸಿದ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳವರ ಕರ್ಮ ಭೂಮಿ ಹಾನಗಲ್ಲಿನಲ್ಲಿಯೇ ಒಬ್ಬ ಸ್ವಾಮಿ ಬರಲು ನಿರ್ಬಂಧ ಹೇರುವ ಜಿಲ್ಲಾಡಳಿತ ಎತ್ತ ಸಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಧರ್ಮ ಸಭೆಗೆ ಆಗಮಿಸುತ್ತಿದ್ದ ಹೂವಿನ ಹಡಗಲಿಯ ಅಭಿನವ ಹಾಲಶ್ರೀ ಮಹಾಸ್ವಾಮಿಗಳು ಹಾಗೂ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಕಾರಿಣಿ ಸದಸ್ಯ ಶ್ರೀಕಾಂತ ಶೆಟ್ಟಿ ಅವರಿಗೆ ಹಾನಗಲ್ಲಿಗೆ ಬರಲು ನಿಬಂಧ ಹೇರಿರುವುದು ಮಠಾಧೀಶರಿಗೆ ಮಾಡಿದ ಅವಮಾನ. ಇದನ್ನು ಖಂಡಿಸುತ್ತೇವೆ. ಹೂವಿನ ಹಡಗಲಿ ಸ್ವಾಮೀಜಿಗಳನ್ನು ಇಲ್ಲಿಗೆ ಕರೆಸಿ ಕಾರ್ಯಕ್ರಮ ಮಾಡೇ ಮಾಡುತ್ತೇವೆ ಎಂದು ಎಚ್ಚರಿಸಿದರು.

ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಶ್ರೀಕಾಂತ ಹೊಸಕೇರಿ ಮಾತನಾಡಿ, ಗಣಪತಿ ಹಬ್ಬದ ಸಂದರ್ಭದಲ್ಲಿ ಮಠಾಧೀಶರು ಧರ್ಮಸಭೆಗೆ ಬಾರದಂತೆ ತಡೆಯುವುದು, ಹಿಂದೂ ಹಬ್ಬಗಳಿಗೆ ಅಡಚಣೆ ಮಾಡುವುದನ್ನು ಸಹಿಸುವುದಿಲ್ಲ. ಗ್ಯಾಂಗ್‌ರೇಪ್ ಮಾಡಿದವರು, ವಿಧಾನಸೌಧ ಎದುರು ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಕೊಳ್ಳಲಾಗದ ಸರ್ಕಾರ ಹಿಂದೂ ಧರ್ಮಪ್ರಚಾರಕರ ಮೇಲೆ ದರ್ಪ ಮೆರೆಯುತ್ತಿರುವುದಕ್ಕೆ ಸರಿಯಾದ ಕಾಲಕ್ಕೆ ಸರಿಯಾದ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.

ಹಿಂದೂ ಧ್ವಜ ಅಭಿಯಾನ ಸಮಿತಿ ಸಂಸ್ಥಾಪಕ ಸಿದ್ದಲಿಂಗಣ್ಣ ಕಮಡೊಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ ಮಾತನಾಡಿದರು.

ವಿರಾಟ ಹಿಂದೂ ಮಹಾಗಣಪತಿ ಸಂಘಟನೆಯ ಸದಸ್ಯ ಗಿರೀಶ ದೇಶಪಾಂಡೆ ಇದ್ದರು. ರವಿಚಂದ್ರ ಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಪುರದ ಸ್ವಾಗತಿಸಿದರು, ಮನೊಜ ಕಲಾಲ ನಿರೂಪಿಸಿದರು. ತುಳಜೇಶ ಮೂಲಿಮನಿ ವಂದಿಸಿದರು.