ಬ್ಯಾಡಗಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕಿಯರ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು.  
ಹಾವೇರಿ

ದಕ ಪ್ರಥಮ, ಹಾವೇರಿ ದ್ವಿತೀಯ

ಬ್ಯಾಡಗಿಯಲ್ಲಿ ರಾಜ್ಯ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿ

ಬ್ಯಾಡಗಿ: ಇಲ್ಲಿನ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಮೂರು ದಿನ ಜರುಗಿದ 19ವಯೋಮಿತಿಯೊಳಗಿನ ರಾಜ್ಯ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

ಪಂದ್ಯಾವಳಿಯಲ್ಲಿ ರಾಜ್ಯದ 33 ತಂಡಗಳು ಪಾಲ್ಗೊಂಡಿದ್ದವು. ಸೆಮಿಫೈನಲ್‌ನಲ್ಲಿ ಬೆಂಗಳೂರು ಸೆಂಟ್ರಲ್ ಹಾಗೂ ಹಾವೇರಿ ಸ್ಪರ್ಧಿಸಿದ್ದು, ಹಾವೇರಿ ಹಾಗೂ ಇನ್ನೊಂದು ಅಂಕಣದಲ್ಲಿ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಸ್ಪರ್ಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ತಂಡ ಫೈನಲ್‌ಗೇರಿದವು.

ಫೈನಲ್‌ನಲ್ಲಿ ದಕ್ಷಿಣ ಕನ್ನಡ 51 ಅಂಕ ಪಡೆದರೆ ಹಾವೇರಿ 22 ಅಂಕಕ್ಕೆ ತೃಪ್ತಿಪಡಬೇಕಾಯಿತು.

ಪ್ರಥಮ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಹಾಗೂ 50 ಸಾವಿರ ರೂ. ನಗದು, ದ್ವಿತೀಯ ಸ್ಥಾನ ಪಡೆದ ಹಾವೇರಿ ತಂಡಕ್ಕೆ 25 ಸಾವಿರ ರೂ. ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆದ ಶಿವಮೊಗ್ಗಕ್ಕೆ 10 ಸಾವಿರ ರೂ. ಬಹುಮಾನ ನೀಡಲಾಯಿತು.

ಹಾವೇರಿ ತಂಡದ ರುಕ್ಷಾನಾ ಬೆಸ್ಟ್ ದಾಳಿಗಾರ್ತಿ, ದಕ್ಷಿಣ ಕನ್ನಡದ ಹರ್ಷಿಣಿ ಉತ್ತಮ ಹಿಡಿತಗಾರ್ತಿ ಹಾಗೂ ಸರ್ವೋತ್ತಮ ಆಟಗಾರ್ತಿ ಜನನಿ ಎನ್ನುವ ಬಾಲಕಿಗೆ ನೀಡಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ನೆಹರು ಓಲೇಕಾರ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕಿ ಲತಾ ಬಿ.ಎಚ್, ಹಿರಿಯ ಕ್ರೀಡಾಪಟು ಗಂಗಣ್ಣ ಎಲಿ, ಎಂ.ಎಫ್.ಕರಿಯಣ್ಣನವರ ಇತರರು ಪಾಲ್ಗೊಂಡಿದ್ದರು.