ಹಿರೇಕೆರೂರ ತಾಲೂಕಿನ ಡಮ್ಮಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆ ಹಾಗೂ ಪಶು ಪ್ರದರ್ಶನ ಕಾರ್ಯಕ್ರಮವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು.  
ಹಾವೇರಿ

Dairy farming ಹೈನುಗಾರಿಕೆಯಿಂದ ರೈತರ ಆರ್ಥಿಕ ಪ್ರಗತಿ ಸಾಧ್ಯ

ಹಿರೇಕೆರೂರ: ಹೈನುಗಾರಿಕೆ (Dairy farming)ಕಸುಬು ಇಂದು ರೈತರಿಗೆ ಕೇವಲ ಉಪಕಸುಬಾಗಿ ಉಳಿಯದೆ, ಉತ್ತಮ ಆದಾಯ ತರುವ ಮೂಲಕ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬಹು ದೊಡ್ಡ ಆಸರೆಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯಪಟ್ಟರು.
ತಾಲೂಕಿನ ಡಮ್ಮಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನ ವಿಸ್ತರಣಾ ಚಟುವಟಿಕೆಗಳಡಿ ಸೋಮವಾರ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರ ತಳಿ ಹಸು-ಎಮ್ಮೆಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಕೇವಲ ಕೃಷಿಗೆ ಅಥವಾ ಒಂದು ಬೆಳೆಗೆ ಸೀಮಿತವಾಗಬಾರದು. ಕೃಷಿಯೊಂದಿಗೆ ಹೈನುಗಾರಿಕೆಯಂತಹ ಉಪಕಸುಬು ಅಳವಡಿಸಿಕೊಂಡಾಗ ಮಾತ್ರ ಬದುಕು ಸುಧಾರಿಸಲು ಸಾಧ್ಯ. ನಮ್ಮ ಜಿಲ್ಲೆಯಲ್ಲಿ, ಅದರಲ್ಲೂ ಹಿರೇಕೆರೂರ ಕ್ಷೇತ್ರದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿರುವುದು ಹೆಮ್ಮೆಯ ವಿಷಯ. ಪ್ರಸ್ತುತ ಹೈನುಗಾರಿಕೆ ಲಾಭದಾಯಕ ಕಸುಬಾಗಿದ್ದು, ಹಾಲಿನ ಜತೆಗೆ ಸೆಗಣಿ ಗೊಬ್ಬರಕ್ಕೂ ಭಾರಿ ಬೇಡಿಕೆ ಇದೆ. ಹೀಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಸಾಕುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಹಾಲು ಕರೆಯುವ ಸ್ಪರ್ಧೆ: ಎಚ್.ಎಫ್, ಜೆರ್ಸಿ ಮತ್ತು ಎಮ್ಮೆ ವಿಭಾಗಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಅತಿ ಹೆಚ್ಚು ಹಾಲು ನೀಡಿದ ಮೊದಲ ಮೂರು ರಾಸುಗಳಿಗೆ ಬಹುಮಾನ ವಿತರಿಸಲಾಯಿತು.
ಪಶು ಪ್ರದರ್ಶನ: ಮಿಶ್ರ ತಳಿ ಹಸುಗಳು ಮತ್ತು ಎಮ್ಮೆಗಳ ದೈಹಿಕ ಸೌಂದರ್ಯ, ಆರೋಗ್ಯ ಹಾಗೂ ಮೈಕಟ್ಟನ್ನು ಆಧರಿಸಿ ತಜ್ಞ ವೈದ್ಯರು ವಿಜೇತರನ್ನು ಆಯ್ಕೆ ಮಾಡಿದರು.
ಪಶು ಸಂಗೋಪನಾ ಇಲಾಖೆ ಮುಖ್ಯ ಪಶುವೈದ್ಯಾಽಕಾರಿ ಡಾ. ಕಿರಣ ಎಲ್., ಡಾ. ಕವಿರಾಜ ಐರಣಿ, ಡಾ. ಮಂಜುನಾಥ ಮಾಯಾಚಾರಿ, ಡಾ. ಉಮೇಶ ಹೊನ್ನತ್ತಿ, ಡಾ. ಪ್ರವೀಣ ಮರಿಗೌಡ್ರ, ಡಾ. ನವಿನಕುಮಾರ ಆರ್.ಎಚ್., ಡಾ. ಶ್ರಾವ್ಯಾ ಜಿ.ಎಸ್., ರಾಜು ಹುಲ್ಲತ್ತಿ, ಹಾಲೇಶ ನಾಯಕ್, ಚೇತನ್ ಎಂ.ಜಿ., ಅನಿಲಕುಮಾರ ಎಸ್.ಜಿ., ಕೆ.ಪಿ. ಕಾಕೋಳ, ಮೃತ್ಯುಂಜಯ ಕುಲಕರ್ಣಿ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಂಘದ ಪದಾಕಾರಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಉಪಸ್ಥಿತರಿದ್ದರು.