ಹಾವೇರಿ

ಎಸ್‌ಐಆರ್ ಹೆಸರಲ್ಲಿ ಮತದಾರರ ಹಕ್ಕು ಕಸಿಯುವ ಆರೋಪ; ಕಾಂಗ್ರೆಸ್ ಪ್ರತಿಭಟನೆ

ಹಾವೇರಿ: ಎಸ್‌ಐಆರ್ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಪದಚ್ಯುತಿಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಷಾ ಸೇರಿ ಹಲವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಎಸ್‌ಐಆರ್ ನೆಪದಲ್ಲಿ ಬಿಜೆಪಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಜ್ಞಾನೇಶ ಕುಮಾರ ಅವರನ್ನು ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಎಸ್‌ಐಆರ್‌ನಲ್ಲಿ ಮತದಾರರ ಹೆಸರುಗಳನ್ನು ರದ್ದುಪಡಿಸಿರುವ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಾಖಲೆಗಳೊಂದಿಗೆ ಮಾಹಿತಿ ನೀಡಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ವಿವಿಧ ಚುನಾವಣೆಗಳ ಫಲಿತಾಂಶಗಳ ಬಗ್ಗೆಯೂ ಅನುಮಾನ ಮೂಡುವಂತಾಗಿದೆ. ಚುನಾವಣಾ ಆಯೋಗದ ಮೇಲಿನ ವಿಶ್ವಾಸ ಉಳಿಸಲು ಜ್ಞಾನೇಶಕುಮಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಮಾತನಾಡಿ, ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಮೂಡಿವೆ. ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು. ಪ್ರತಿ ಬೂತ್‌ನಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಉಳಿಯಬೇಕಾದರೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಎಸ್‌ಐಆರ್ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಚುನಾವಣಾ ವ್ಯವಸ್ಥೆಯ ಕುರಿತ ಅನುಮಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಶಿಗ್ಗಾಂವ ಶಾಸಕ ಯಾಸೀರ್‌ಖಾನ್ ಪಠಾಣ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿದರು. ನಂತರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದ್ದೇವರಮಠ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮರಗಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಪ್ರಮುಖರಾದ ವಸಂತಾ ಬಾಗೂರ, ಮಂಜನಗೌಡ ಪಾಟೀಲ, ಎಂ.ಎಂ. ಹಿರೇಮಠ, ಕೊಟ್ರೇಶಪ್ಪ ಬಸೇಗಣ್ಣಿ, ಪ್ರೇಮಾ ಪಾಟೀಲ, ಎಂ.ಎಂ. ಮೈದೂರ, ಈರಪ್ಪ ಲಮಾಣಿ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.