ಪ್ರತಿಭಟನೆ 
ಹಾವೇರಿ

ಕೋಳಿ ದರ ಹೆಚ್ಚಳಕ್ಕೆ ಸಾಕಾಣಿಕೆದಾರರ ಪಟ್ಟು: ಕಂಪನಿ ಎದುರು ಧರಣಿ

ರಾಣೆಬೆನ್ನೂರು: ಕೋಳಿ ಸಾಕಾಣಿಕೆ ಉದ್ಯಮವು ಉತ್ಪಾದನಾ ವೆಚ್ಚದ ಹೆಚ್ಚಳ, ಮಾರುಕಟ್ಟೆಯಲ್ಲಿ ದೊರೆಯದ ಸಮರ್ಪಕ ದರ ಸೇರಿದಂತೆ ಹಲವು ಸಮಸ್ಯೆಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಜೀವಂತ ಕೋಳಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ನ್ಯಾಯಯುತ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೋಳಿ ಸಾಕಾಣಿಕೆದಾರರ ಸಂಘಟನೆ ವತಿಯಿಂದ ತಾಲೂಕಿನ ತೆರದಹಳ್ಳಿ ಗ್ರಾಮದ ವೆಂಕಟೇಶ್ವರ ಹ್ಯಾಚರಿಸ್ ಕಂಪನಿ ಎದುರು ಸೋಮವಾರ ಧರಣಿ ಆರಂಭಿಸಿದರು.

ಸಂಟನೆಯ ಜಿಲ್ಲಾಧ್ಯಕ್ಷ ಸುಭಾಸಗೌಡ ಪಾಟೀಲ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಕೋಳಿ ಸಾಕಾಣಿಕೆ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಜೀವಂತ ಕೋಳಿಯ ಮಾರುಕಟ್ಟೆ ದರ ಏರಿಕೆಯಾಗದಿರುವುದು ಸಾಕಾಣಿಕೆದಾರರ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಆಹಾರ, ಔಷಧ, ಮರಿಗಳ ಖರೀದಿ, ವಿದ್ಯುತ್, ಕಾಮಿರ್ಕರ ವೇತನ, ನಿರ್ವಹಣೆ ಸೇರಿದಂತೆ ಸಾಕಾಣಿಕೆಗೆ ಸಂಬಂಧಿಸಿದ ಪ್ರತಿಯೊಂದು ವೆಚ್ಚವೂ ಹೆಚ್ಚಾಗಿದೆ. ಆದರೆ, ಕೋಳಿ ಮಾರಾಟದಿಂದ ದೊರೆಯುವ ಆದಾಯ ಮಾತ್ರ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವಷ್ಟು ಇಲ್ಲ ಎಂದು ಸಾಕಾಣಿಕೆದಾರರು ಅಸಮಾಧಾನ ವ್ಯಕ್ತಪಡಿಸಿದರು.

ಉತ್ಪಾದನಾ ವೆಚ್ಚದಲ್ಲಿ ನಿರಂತರ ಹೆಚ್ಚಳವಾಗುತ್ತಿದ್ದರೂ, ಮಾರುಕಟ್ಟೆಯಲ್ಲಿ ಅದಕ್ಕೆ ಅನುಗುಣವಾದ ದರ ಸಿಗುತ್ತಿಲ್ಲ. ಇದರ ಪರಿಣಾಮವಾಗಿ ಸಾಕಾಣಿಕೆದಾರರು ಪ್ರತಿಯೊಂದು ಬ್ಯಾಚ್ನಲ್ಲೂ ನಷ್ಟ ಅನುಭವಿಸುವಂತಾಗಿದೆ. ಸಾಲ ಮಾಡಿ ಶೆಡ್ ನಿಮಿರ್ಸಿ, ಕೋಳಿ ಮರಿಗಳನ್ನು ಸಾಕಿ, ಆಹಾರ ಹಾಗೂ ಔಷಧಗಳಿಗೆ ಹಣ ಖರ್ಚು ಮಾಡಿದ ಬಳಿಕವೂ ನಿರೀಕ್ಷಿತ ಆದಾಯ ದೊರೆಯದಿರುವುದರಿಂದ ಅನೇಕ ಸಾಕಾಣಿಕೆದಾರರು ಉದ್ಯಮ ತೊರೆಯುವ ಸ್ಥಿತಿಗೆ ಬಂದಿದ್ದಾರೆ.

ಕೋಳಿ ಸಾಕಾಣಿಕೆದಾರರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಉತ್ಪಾದನಾ ವೆಚ್ಚ, ಮಾರುಕಟ್ಟೆ ಪರಿಸ್ಥಿತಿ, ಆಹಾರ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆಗಳನ್ನು ಪರಿಗಣಿಸಿ ಜೀವಂತ ಕೋಳಿಗೆ ನ್ಯಾಯಯುತ ಹಾಗೂ ವೈಜ್ಞಾನಿಕ ದರ ನಿಗದಿಪಡಿಸಬೇಕು. ಸಾಕಾಣಿಕೆದಾರರು ನಿರಂತರ ನಷ್ಟ ಅನುಭವಿಸದಂತೆ ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಹಲವು ವರ್ಷಗಳಿಂದ ಉತ್ಪಾದನೆ ಮಾಡಿದ ಕೋಳಿಯ ದರ ಕೆ.ಜಿ.ಗೆ 6.50 ರೂ. ಇದೆ. ಈಗಲೂ ಅಷ್ಟೇ ಇದೆ. ಆದ್ದರಿಂದ ಉತ್ಪಾದನಾ ವೆಚ್ಚ ಆಧರಿಸಿ ನಮಗೆ 10.46 ರೂ.ಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು. ಸಂಬಂಧಿಸಿದ ಅಧಿಕಾರಿಗಳು, ಹ್ಯಾಚರಿಸ್ ಹಾಗೂ ಕೋಳಿ ಮಾರುಕಟ್ಟೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕು. ಅಲ್ಲಿಯವರೆಗೆ ಧರಣಿ ಹಿಂತೆಗೆದುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.

ಪ್ರಮುಖರಾದ ಬಸನಗೌಡ ಗಂಗನಗೌಡ್ರ, ಹನುಮಂತಪ್ಪ ಓಲೇಕಾರ, ಸಿದ್ದನಗಗೌಡ ಗಂಗನಗೌಡ್ರ, ಅರವಿಂದ ಜಿ., ವೀರನಗೌಡ ಗೌಡ್ರ, ಶಂಕರಗೌಡ ಗ್ಯಾನಗೌಡ್ರ, ಮಂಜಪ್ಪ ಗುಗ್ರಿ, ಸಾಧಿಕ್ ಬಿಲಾಲ, ಮುನೀರ ಅಹ್ಮದ್, ಲೋಕೇಶ್ವರಪ್ಪ, ಬಸವರಾಜ ಕೊಟ್ಟೂರು, ಶಂಕರ ಶಿವಣ್ಣನವರ ಮತ್ತಿತರರು ಪಾಲ್ಗೊಂಡಿದ್ದರು.