byadgi ಬ್ಯಾಡಗಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಸವರಾಜ ಶಿವಣ್ಣನವರ ಭೂಮಿ ಪೂಜೆ ನೆರವೇರಿಸಿದರು.
ಬ್ಯಾಡಗಿ: ಪಟ್ಟಣದಲ್ಲಿ ಹೆಚ್ಚಾಗಿ ಅಪಘಾತ ಸಂಭವಿಸುವೆಡೆ ಅನಿವಾರ್ಯವಾಗಿ ರಸ್ತೆ ಅಭಿವೃದ್ಧಿಪಡಿಸಿ ವೃತ್ತ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಇಲ್ಲಿನ ಮಾಸಣಗಿ ಕ್ರಾಸ್ ಬಳಿ 3.25 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಸಿಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೆಲ ಸಮಸ್ಯೆಗಳಿಂದ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗುತ್ತಿಲ್ಲ. ಸಮಸ್ಯೆ ಇತ್ಯರ್ಥಪಡಿಸಲು ಸ್ಥಳೀಯರೊಂದಿಗೆ ಸಾಕಷ್ಟು ಶ್ರಮಿಸಿದ್ದು, ನ್ಯಾಯಾಲಯವರೆಗೂ ತೆರಳಿರುವೆ. ರಸ್ತೆ ಕಾಮಗಾರಿಗೆ ಸಾರ್ವಜನಿಕರು, ಸಂಘ, ಸಂಸ್ಥೆಗಳು ಸಾಕಷ್ಟು ಹೋರಾಟ ಮಾಡುತ್ತಿವೆ. ಪುನಃ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದರು.
ಮಾಸಣಗಿ ಕ್ರಾಸ್ ಬಳಿ ಕೂಡು ರಸ್ತೆಯಲ್ಲಿ ಪದೇ ಪದೆ ಅಪಘಾತ ಸಂಭವಿಸುತ್ತಿರುವ ಕುರಿತು ಇಲಾಖೆಯಿಂದ ವರದಿ ಬಂದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗಾಂಧಿನಗರ ಹಾಗೂ ರಟ್ಟಿಹಳ್ಳಿ ರಸ್ತೆ ಕಡೆಯಿಂದ ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆನೀರು ಹರಿದು ಬಸ್ ನಿಲ್ದಾಣ ಸೇರುತ್ತಿರುವ ಹಿನ್ನೆಲೆಯಲ್ಲಿ ಸಿಡಿ ನಿರ್ಮಾಣ ಅಗತ್ಯವಾಗಿದೆ ಎಂದರು.
ಭೂಮಿಪೂಜೆ ಜಾಗೆಯಲ್ಲಿ ಪ್ರತಿಭಟನೆ
ಮುಖ್ಯರಸ್ತೆಯಲ್ಲಿ ಕಾಮಗಾರಿ ಮಂಜೂರಾತಿ ಪಡೆಯುವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ರಸ್ತೆ ಅಗಲೀಕರಣ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು.
ಸಮಿತಿ ಗೌರವಾಧ್ಯಕ್ಷ ಗಂಗಾಧರ ಎಲಿ ಮಾತನಾಡಿ, ಮುಖ್ಯರಸ್ತೆ ಕಾಮಗಾರಿ ಸಲುವಾಗಿ ಹತ್ತಾರು ವರ್ಷ ಹೋರಾಟ ನಡೆಸಿದ್ದೇವೆ. ನ್ಯಾಯಾಲಯದಲ್ಲಿ ಎಲ್ಲ ಸಮಸ್ಯೆಗಳು ಇತ್ಯರ್ಥವಾದರೂ ಅಧಿಕಾರಿಗಳು ಕಾಮಗಾರಿ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ. ಮುಖ್ಯರಸ್ತೆ ಕಾಮಗಾರಿ ಮಂಜೂರಾಗಿ ಚಾಲನೆ ಸಿಗುವವರೆಗೂ ಯಾವುದೇ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಅಲ್ಲದೆ, ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಶಾಸಕರು ಪ್ರತಿಕ್ರಿಯಿಸಿ, ನಾವು ಮುಖ್ಯರಸ್ತೆಯಲ್ಲಿ ಕಾಮಗಾರಿ ನಡೆಸುತ್ತಿಲ್ಲ, ಮಾಸಣಗಿ ಗ್ರಾಮಕ್ಕೆ ಹೋಗುವ ರಸ್ತೆ ಹಾಗೂ ಮಳೆನೀರು ರಸ್ತೆ ಮೇಲೆ ಬಾರದಂತೆ ಸಿಡಿ ನಿರ್ಮಸಲಾಗುತ್ತಿದೆ. ಅಭಿವೃದ್ಧಿಗೂ ಅವಕಾಶ ಮಾಡಿಕೊಡಿ. ಪಟ್ಟಣದಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮನವರಿಕೆ ಮಾಡಿದ ಬಳಿಕ ಭೂಮಿಪೂಜೆಗೆ ಅವಕಾಶ ಕಲ್ಪಿಸಲಾಯಿತು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭಣ್ಣ ಪಾಟೀಲ, ನಾಗರಾಜ ಆನ್ವೇರಿ, ಫಕೀರಮ್ಮ ಚಲವಾದಿ, ರಾಮಣ್ಣ ಕೋಡಿಹಳ್ಳಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೆಸೀಮೆ, ಡಾ.ಎ.ಎಂ. ಸೌದಾಗರ್, ಪಿಡಬ್ಲುೃಡಿ ಇಂಜಿನಿಯರ್ ಎಂ. ಆಂಜನೇಯ, ಗುತ್ತಿಗೆದಾರ ಸಂತೋಷ ಹಿರೇಮಠ, ಸುರೇಶ ಚಲವಾದಿ, ಕಿರಣ ಎಂ.ಎಲ್, ಹರೀಶ ರಿತ್ತಿ, ಪಾಂಡುರಂಗ ಸುತಾರ, ಶಿವು ಕಲ್ಲಾಪುರ, ಅಜೀಜ್‌ಸಾಬ ಬಿಜಾಪುರ ಇತರರಿದ್ದರು.