ಬ್ಯಾಡಗಿ ಪಟ್ಟಣದ ಶ್ರೀ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವಿ-ಜುವೇಲರ್ಸ್ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ನಿವೃತ್ತ ಡಾ. ಎಸ್.ಜಿ. ವೈದ್ಯ ಚಾಲನೆ ನೀಡಿದರು. ಉಮೇಶ ವರ್ಣೆಕರ, ಗಣೇಶ ವರ್ಣೆಕರ, ರಾಜಣ್ಣ ಮೋರಿಗೇರಿ, ಕುಮಾರಗೌಡ್ರ ಪಾಟೀಲ ಇದ್ದರು.
- ಡಾ. ಎಸ್.ಜಿ. ವೈದ್ಯ ಅನಿಸಿಕೆ ಬ್ಯಾಡಗಿಯಲ್ಲಿ ಯೋಗ ದಿನಾಚರಣೆ
ಬ್ಯಾಡಗಿ: ಸನಾತನ ಕಾಲದಿಂದಲೂ ಅಧ್ಯಾತ್ಮಿಕ ಸಾಧನೆಗೆ ಯೋಗಾಸನ ಒಂದು ಸಾಧನವಾಗಿದೆ. ಮಾನಸಿಕ ಬೆಳವಣಿಗೆಯಲ್ಲಿ ದೈಹಿಕ ಚಟುವಟಿಕೆ ಮುಖ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಸ್.ಜಿ. ವೈದ್ಯ ಹೇಳಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವಿ-ಜುವೇಲರ್ಸ್ ಆಯೋಜಿಸಿದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಸ್ಕೃತ ಪದ ಯುಜ್‌ನಿಂದ ಬಂದಿರುವ ಯೋಗದ ಅರ್ಥ ಒಂದುಗೂಡಿಸುವುದು ಎಂದರ್ಥ, ಮನಸು, ದೇಹ ಹಾಗೂ ಆತ್ಮವನ್ನು ಸ್ವಾಮರಸ್ಯಕ್ಕೆ ತಂದು ಜೀವನ ಶೈಲಿಯನ್ನು ತೋರಿಸುತ್ತದೆ. ಋಷಿಮುನಿಗಳ, ಯೋಗ ಸಾಧಕರು ಹಾಗೂ ದೈವಿಪುರುಷರು ಸನಾತನ ಧರ್ಮದಲ್ಲಿ ಬರುವ ಯೋಗ ರೂಢಿಸಿಕೊಂಡಿದ್ದರು. ಪತಂಜಲಿ ಯೋಗ ಪುರಾತನ ಕಾಲದಿಂದಲೂ ಅನುಸರಿಸಲಾಗುತ್ತಿದೆ. ಆತ್ಮಶುದ್ಧತೆ, ಜೀವನಶೈಲಿಗೆ ಯೋಗದ ಅಗತ್ಯವಿದೆ ಎಂದರು.
ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತದ್ದು. ಆಯುರ್ವೆದ ಹಾಗೂ ಸತಾತನ ತತ್ವ ಸಿದ್ಧಾಂತ, ಆಧ್ಯಾತ್ಮವನ್ನು ಧಾರೆ ಎರೆಯುತ್ತಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಈಗ ಯೋಗ ಹೆಚ್ಚು ಪ್ರಚಲಿತವಾಗಿದೆ. ಋಷಿಮುನಿಗಳಿಂದ ನಡೆದು ಬಂದಿರುವ ಯೋಗ, ಪ್ರಾಣಾಯಾಮದಿಂದ ಆಯುಷ್ಯ ವೃದ್ಧಿ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.
ವಿ-ಜುವೇಲರ್ಸ್ ವತಿಯಿಂದ ಯೋಗಾಸನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಹಣ್ಣು ಹಾಗೂ ಮೊಳಕೆಯೊಡೆದ ಕಾಳುಗಳು, ಜ್ಯೂಸ್ ವಿತರಿಸಲಾಯಿತು. ಸುಮಾರು 300 ಹೆಚ್ಚು ಸಾರ್ವಜನಿಕರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿ-ಜುವೇಲರ್ಸ್ ಮಾಲೀಕ ಉಮೇಶ ವರ್ಣೆಕರ, ಗಣೇಶ ವರ್ಣೆಕರ, ವರ್ತಕರ ಸಂಘದ ಕಾರ್ಯದರ್ಶಿ ರಾಜಣ್ಣ ಮೋರಿಗೇರಿ, ಉದ್ಯಮಿಗಳಾದ ಕುಮಾರಗೌಡ್ರ ಪಾಟೀಲ, ಪ್ರಶಾಂತ ಯಾದವಾಡ, ಸ್ವಯಂ ಸೇವಕ ಸಂಘದ ಪ್ರಚಾರಕ ಸುನಿಲ ತೋಟಗೇರ, ಮಹಾಂತೇಶ ಅಂಕಲಕೋಟಿ, ವಿನಯನಾಥ ರಾವಳ, ಪ್ರವೀಣ ಯಾದವಾಡ, ಶಿವಕುಮಾರ ಕಲ್ಲಾಪುರ, ಸಿದ್ದಣ್ಣ ಮೂಡ್ವಿ, ಚಂದ್ರು ಗಾಣಿಗೇರ ಇದ್ದರು.