ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಗ್ರಾಮದಲ್ಲಿ ಜರುಗಿದ ಹೋರಿ ಬೆದರಿಸುವ ಹಬ್ಬದಲ್ಲಿ ಹೋರಿಯೊಂದು ಓಡುತ್ತಿರುವುದು.
ವಿಜಯವಾಣಿ ಸುದ್ದಿಜಾಲ ಬ್ಯಾಡಗಿ
ಹೋರಿ ಬಿಟ್ಟಾರ.. ಹೋರಿ ಬಿಟ್ಟಾರ.. ಹಿಡ್ಕೋರಿ ಹೋರಿನಾ, ಹರ್ಕೊರಿ ಕೊಬ್ಬರಿನ ಎನ್ನುವ ಮೈಕಾಸುರನ ಆರ್ಭಟದ ಧ್ವನಿ ಕೇಳುತ್ತಿದ್ದಂತೆ ಜನರ ದಂಡು ಹೋರಿ ಹಿಡಿಯಲು ತಾ ಮುಂದು, ನಾ ಮುಂದು ಎನ್ನುವಂತೆ ಮುನ್ನುಗ್ಗುತ್ತಿದ್ದ ದೃಶ್ಯಗಳು ಮೈಮನ ರೋಮಾಂಚನಗೊಳಿಸಿದವು.
ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಗ್ರಾಮದೇವತಾ ಪ್ರಧಾನ ಕಮಿಟಿ, ಗ್ರಾಮಸ್ಥರ ಆಶ್ರಯದಲ್ಲಿ ಮಂಗಳವಾರ ಕ್ವಾಟಿ ಹನುಮಪ್ಪ ದೇವಸ್ಥಾನದ ಹಿಂಭಾಗದಲ್ಲಿ ಜರುಗಿದ ಬಾರಿ ಹೋರಿ ಬೆದರಿಸುವ ಅಖಾಡದಲ್ಲಿ ಸಾವಿರ ಜನಸ್ತೋಮ ಸೇರಿ ರೋಚಕ ಕ್ಷಣಗಳಿಗೆ ಸಾಕ್ಷಿಯಾದರು.
ಗ್ರಾಮೀಣ ಪ್ರದೇಶದಲ್ಲಿ ಇಂತಹ ಹಬ್ಬ ಸಾಕಷ್ಟು ಸಂಭ್ರಮ ಸಡಗರದ ಜತೆ ಹೋರಿ ಮಾಲೀಕರಿಗೆ ಎಲ್ಲಿಲ್ಲದ ಸಂತಸ ತಂದಿದೆ. ಹಾವೇರಿ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಹೋರಿಗಳನ್ನು ಮಾಲೀಕರು ಸೋಮವಾರ ರಾತ್ರಿಯೇ ವಾಹನಗಳಲ್ಲಿ ಗ್ರಾಮಕ್ಕೆ ತಂದು ವಿಶ್ರಾಂತಿಗಾಗಿ ತಂಗಿದ್ದರು. ಪ್ರತಿ ಹೋರಿಗಳ ಹಿಂದೆ ಹತ್ತಾರು ಜನ ಯುವಕರ ತಂಡ ಕೇಕೆ ಹಾಕುತ್ತ ಓಡುವುದನ್ನು ನೋಡುವುದೇ ದೊಡ್ಡ ಸಡಗರ.
ಹೋರಿ ಮಾಲೀಕರು ತಮ್ಮ ಹೋರಿಗಳನ್ನು ಒಬ್ಬರಿಗಿಂತ ಇನ್ನೊಬ್ಬರು ಸಿಂಗರಿಸುತ್ತ ಸ್ಪರ್ಧಾ ಮನೋಭಾವ ಹೊಂದಿದ್ದರು. ಎತ್ತುಗಳ ಮೈಮೇಲೆ ಮಿಂಚುವ ಬಣ್ಣದ ಜೂಲ, ಕೊರಳಿಗೆ ಕೊಬ್ಬರಿ ಗಿಟುಕದ ಸರ, ಎತ್ತರದ ಕೋಡುಗಳಿಗೆ ಬಲೂನ್ ಗುಚ್ಚ, ಹಣೆಯ ಮೇಲೆ ನವಲಿನ ಗರಿಗಳನ್ನು ಕಟ್ಟಿಕೊಂಡು ಹೋರಿಗಳ ಹಿಂದೆ ಓಡುವ ದೃಶ್ಯಗಳು ಸ್ಪರ್ಧೆಯ ರೋಚಕತೆ ಹೆಚ್ಚಿಸಿತು.
ಗೌಡ್ರ ಮಗ, ಬ್ಯಾಡಗಿ ಎಕ್ಸ್‌ಪ್ರೆಸ್ ಕಿಚ್ಚ, ಬ್ಯಾಡಗಿ ದೊರೆ, ಜಿಂಕೆಮರಿ, ರಾಜಕುಮಾರ, ನಮ್ಮೂರ ಚೆಲುವ, ಗೆಳೆಯ, ಕಿರಾತಕ, ಗುರುದೇವ, ಮಯೂರ, ಗಜ, ವೀರಕೇಸರಿ, ಗರುಡ, ನಮ್ಮೂರು ಹಮ್ಮಿರ, ಮೈಸೂರು ಹುಲಿ, ಮಲೆನಾಡು ಚಲುವ, ಸಿಂಹದ ಮರಿ, ಹೀಗೆ ನಾನಾ ತರಹದ ಹೆಸರುಗಳ ನಾಮಲಕ ಹಿಡಿದು ಓಡುತ್ತಿದ್ದರು. ಸುಮಾರು 500 ಹೆಚ್ಚು ಹೋರಿಗಳು ಹಬ್ಬದಲ್ಲಿ ಪಾಲ್ಗೊಂಡಿದ್ದವು.