ಬ್ಯಾಡಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ಯಂತ್ರಗಳಿಂದ ಕಟ್ಟಡಗಳ ತೆರವು (building evacuation) ಕಾರ್ಯಾಚರಣೆ ನಡೆಯಿತು.
ಬ್ಯಾಡಗಿ: ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಬಹುತೇಕ ಕಟ್ಟಡಗಳು (building evacuation) ನೆಲಸಮಗೊಂಡಿವೆ. ಉಳಿದಿರುವ ಕಟ್ಟಡಗಳ ಮಾಲೀಕರನ್ನು ಮನವೊಲಿಸುವ ಕಾರ್ಯ ನಡೆದಿದ್ದು, ತೆರವು ಕಾರ್ಯಾಚರಣೆ ಒಂದೆರಡು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ.
ಕಳೆದ ಮೂರು ದಿನಗಳ ಕಾಲ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಬೆಳಗ್ಗೆಯಿಂದ ಸಂಜೆಯವರೆಗೆ ಬ್ಯಾಡಗಿಯಲ್ಲಿ ಎಲ್ಲೆಡೆ ಓಡಾಡುತ್ತ ರಸ್ತೆ ತೆರವು ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದಾರೆ. ಇವರೊಂದಿಗೆ ಲೋಕೋಪಯೋಗಿ, ಪುರಸಭೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಬಹುತೇಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ.
ಈವರೆಗೂ ನೆಲಸಮಗೊಂಡ ಕಟ್ಟಡಗಳ ಎಷ್ಟು?: ಶನಿವಾರ, ಭಾನುವಾರ, ಸೋಮವಾರ ಸೇರಿದಂತೆ ಈವರೆಗೂ 100ಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿದ್ದು, ಇನ್ನುಳಿದ ಕಟ್ಟಡಗಳನ್ನು ತೆರವುಗೊಳಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸ್ಥಳಕ್ಕಾಗಮಿಸಿದ್ದರು. ಈವರೆಗೆ ಪರಿಹಾರ ಪಡೆಯದ ಕಟ್ಟಡ, ಜಾಗಗಳ ಮಾಲೀಕರ ಮನವೊಲಿಸುವಲ್ಲಿ ಜಿಲ್ಲಾಧಿಕಾರಿ ಯಶಸ್ವಿಯಾಗಿದ್ದಾರೆ. ನಿಮಗೆ ಪರಿಹಾರ ಹಣ ತೆಗೆದಿರಿಸಿದೆ. ನೀವು ನಮ್ಮವರೇ, ಎಲ್ಲರ ಸಹಕಾರ ಅಗತ್ಯ. ಯಾರಿಗೂ ತೊಂದರೆ ನೀಡುವ ಉದ್ದೇಶವಿಲ್ಲ. ನಿಮ್ಮೂರಿನ ಅಭಿವೃದ್ಧಿಗೆ ಎಲ್ಲ ಸಾರ್ವಜನಿಕರು, ಭೂಮಾಲೀಕರು, ಅ-ಕಾರಿಗಳ ತಂಡ ಕೈಜೋಡಿಸುತ್ತಿದೆ. ಕೆಲವೇ ಕೆಲವರಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನೆಡೆಯಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ನೀವೆಲ್ಲ ಸರ್ಕಾರದಿಂದ ಪರಿಹಾರ ಮೊತ್ತ ಪಡೆಯಿರಿ, ತೆರವಿಗೆ ಅವಕಾಶ ಮಾಡಿಕೊಡಿ ಎಂದು ಮನವೊಲಿಸಿದರು. ಪರಿಣಾಮ ಸೋಮವಾರ ಬಹುತೇಕ ಮಾಲೀಕರು ಸ್ವಯಂಪ್ರೇರಿತರಾಗಿ ಕಟ್ಟಡ ತೆರವು ಮಾಡಿಕೊಳ್ಳಲು ಮುಂದಾಗಿದ್ದಾರೆ.
ಬಿಡುಗಡೆಯಾದ ಪರಿಹಾರ ಮೊತ್ತ: ಭೂಸ್ವಾಧಿನ ಪ್ರಕ್ರಿಯೆಗೆ ಮಂಜೂರಾದ ಒಟ್ಟು ಮೊತ್ತ 24 ಕೋಟಿ ರೂ. ಪಟ್ಟಣದ 303 ಮಾಲೀಕರ ಪೈಕಿ 132 ಮಾಲೀಕರು ಪರಿಹಾರ ಪಡೆಯಲು ಅಜಿರ್ ಸಲ್ಲಿಸಿದ್ದು, ಈವರೆಗೂ 108 ಜನರಿಗೆ 10 ಕೋಟಿ ರೂಪಾಯಿಗೂ ಅಧಿಕ ಮೊತ್ತ ಪರಿಹಾರ ವಿತರಣೆಯಾಗಿದೆ. ಹೆಚ್ಚುವರಿಯಾಗಿ ಇನ್ನುಳಿದ 24 ಕಟ್ಟಡಗಳ ಪೈಕಿ 12 ಪುರಸಭೆ ಕಟ್ಟಡಗಳಿಗೆ 1.30 ಕೋಟಿ ರೂ. ಹಾಗೂ 12 ಭೂ ಮಾಲೀಕರಿಗೆ 70 ಲಕ್ಷ ರೂ. ಎರಡು ದಿನದಲ್ಲಿ ಜಮೆಯಾಗಲಿದೆ. ಇನ್ನುಳಿದ 171 ಮಾಲೀಕರ 14 ಕೋಟಿ ರೂ. ಪರಿಹಾರದ ಮೊತ್ತವನ್ನು ಜಿಲ್ಲಾ ನ್ಯಾಯಾಲಯದ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆದಿದೆ.
ಪರಿಹಾರ ಪಡೆಯದೆ ಇರುವ ಕಟ್ಟಡಗಳ ಮಾಲೀಕರು ತಮ್ಮ ಪರಿಹಾರ ಹಣ ಪಡೆಯಲು ಜಿಲ್ಲಾಧಿಕಾರಿ ಕಚೇರಿ ಸಂಪಕಿರ್ಸಬಹುದು. ತೆರವು ಕಾರ್ಯ ರ್ಪೂಣಗೊಂಡ ಬಳಿಕ ರಸ್ತೆ ಅಭಿವೃದ್ಧಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ವಂತ ನಿಧಿಯ 13 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧೂಳುಮಯ ರಸ್ತೆಯಲ್ಲಿ ಓಡಾಟ: ಮುಖ್ಯರಸ್ತೆಯ ಅಂಗಡಿಗಳು ತೆರವು ಕಾರ್ಯಾಚರಣೆ ಸಲುವಾಗಿ ಸಂರ್ಪೂಣ ಬಂದ್ ಆಗಿವೆ. ಮೂರು ದಿನಗಳಿಂದ ಅಧಿಕಾರಿಗಳು, ಪೋಲಿಸರು ಹಾಗೂ ಅಲ್ಲಿನ ಮಾಲೀಕರು ಹಾಗೂ ಸಾರ್ವಜನಿಕರು ಧೂಳಿನ ರಸ್ತೆಯಲ್ಲಿ ಓಡಾಡುವಂತಾಗಿದೆ. ಬಸ್ ನಿಲ್ದಾಣಕ್ಕೆ ಬಸ್ಗಳು ಬಾರದಂತಾಗಿದ್ದು, ಇದಕ್ಕಾಗಿ ಬೇರೆ ಸ್ಥಳ ಗುರುತಿಸಿದ್ದು, ಎಲ್ಲರೂ ಕಾಲ್ನಡಿಗೆ ಹಾಗೂ ಆಟೋ ಸೇವೆ ಅವಲಂಬಿಸಿದ್ದಾರೆ.