ಬ್ಯಾಡಗಿ ಪಟ್ಟಣದ ಮುಖ್ಯರಸ್ತೆಯಲ್ಲಿ building-clearance ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಜೆಸಿಬಿ, ಟ್ರ್ಯಾಕ್ಟರ್‌ನೊಂದಿಗೆ ಕಾರ್ಮಿಕರು ಕೆಲಸದಲ್ಲಿ ತೊಡಗಿರುವುದು.
- ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಕಾಮಗಾರಿ
- ಮಾರ್ಗ ಬದಲಾವಣೆಯಿಂದ ಹೈರಾಣ
ಬ್ಯಾಡಗಿ: ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯ ರಸ್ತೆ ಪಕ್ಕದ ಕಟ್ಟಡಗಳ ತೆರವು ಕಾರ್ಯಾಚರಣೆ ಎರಡನೇ ದಿನ ಭಾನುವಾರವೂ ನಡೆಯಿತು. ಮುಖ್ಯರಸ್ತೆಯ ಎಲ್ಲ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದ್ದವು. ಪುರಸಭೆ ಕಾರ್ಮಿಕರು ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳೊಂದಿಗೆ ಎಡೆಬಿಡದೆ ಕೆಲಸದಲ್ಲಿ ತೊಡಗಿದ್ದರು. ಒಟ್ಟಾರೆ ಶನಿವಾರ ಮತ್ತು ಭಾನುವಾರ ನಡೆಸಲಾದ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಸೋಮವಾರವೂ ಜೆಸಿಬಿ ಗರ್ಜನೆ ಕೇಳಿಬರಲಿದೆ.
ಎಲ್ಲೆಲ್ಲಿ ಕಟ್ಟಡ ತೆರವು
ಕೆಸಿಸಿ ಬ್ಯಾಂಕ್‌ನಿಂದ ಎಸ್‌ಜೆಜೆಎಂ ಶಾಲೆಯವರೆಗೂ ಸುಮಾರು 950 ಮೀಟರ್ ರಸ್ತೆ ವಿಸ್ತರಣೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಪರಿಣಾಮ ಹಳೇಪುರಸಭೆ ಎದುರಿನ ಹೂವಿನ ಅಂಗಡಿ, ಬೇಕರಿ, ವರ್ತಕರ ಅತಿಥಿ ಗೃಹದ ವಾಣಿಜ್ಯ ಮಳಿಗೆಗಳು, ಚೌಡೇಶ್ವರಿ ದೇವಸ್ಥಾನ, ಪುರಸಭೆ ವಾಣಿಜ್ಯ ಮಳಿಗೆಗಳು, ಎದುರಿನ ಅಂಗಡಿಗಳು, ಬೀರೇಶ್ವರ ದೇವಸ್ಥಾನ ಬಳಿಯ ಕೆಲಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಅಲ್ಲದೆ, ಮುಖ್ಯರಸ್ತೆಯ ಎಸ್‌ಬಿಐ ಬ್ಯಾಂಕ್, ಗಜಾನನ ಬ್ಯಾಂಕ್ ಬಳಿ, ಮುಪ್ಪಿನಸ್ವಾಮಿ ಮಠದ ಕ್ರಾಸ್, ಸುಭಾಸ ಸರ್ಕಲ್, ಶಾಲೆ ನಂ. 1 ಕಾಂಪೌಂಡ್ ಸೇರಿದಂತೆ ಕೆಲವು ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ಈಗ ಪರಿಹಾರ ಪಡೆದುಕೊಂಡ ಕಟ್ಟಡಗಳನ್ನು ಮಾತ್ರ ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ಮುಂದೆ ಇನ್ನುಳಿದ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡಿ ಮತ್ತೊಮ್ಮೆ ತೆರವು ಕಾರ್ಯ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳ ಮಾರ್ಗ ಬದಲಾವಣೆ
ಬ್ಯಾಡಗಿ ಕೇಂದ್ರ ಸ್ಥಾನವಾದ ಹಳೇಪುರಸಭೆ ಸರ್ಕಲ್, ಬಸ್ ನಿಲ್ದಾಣ, ಸುಭಾಸ್ ಸರ್ಕಲ್ ಕಡೆಗೆ ತೆರಳುವ ವಾಹನಗಳಿಗೆ ಅವಕಾಶವಿಲ್ಲ. ತಾಲೂಕಿನ ಗುಮ್ಮನಹಳ್ಳಿ, ಮಾಸಣಗಿ, ತಿಳವಳ್ಳಿ, ಆನವಟ್ಟಿ ಕಡೆಗೆ ತೆರಳುವ ಬಸ್, ಖಾಸಗಿ ವಾಹನಗಳು, ಆಟೋ ಸೇರಿದಂತೆ ಎಲ್ಲ ವಾಹನಗಳನ್ನು ಕಾರು ಸ್ಟಾೃಂಡ್ ಬಳಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅವೆಲ್ಲವೂ ಮತ್ತೆ ಅಲ್ಲಿಂದಲೇ ವಾಪಸ್ ತೆರಳುವಂತೆ ಸೂಚಿಸಲಾಗಿದೆ. ಹಾವೇರಿ, ಕಾಕೋಳ, ಛತ್ರ ಕಡೆಯಿಂದ ಬರುವ ವಾಹನಗಳನ್ನು ಹಳೇಪೊಲೀಸ್ ಸ್ಟೇಷನ್ ಬಳಿ ನಿಲ್ಲಿಸಲಾಗುತ್ತಿದೆ. ವಾಹನ ಸವಾರರು ಹಾಗೂ ಜನರು ಅಲ್ಲಿಂದಲೇ ಆಟೋ ಇಲ್ಲವೇ ಕಾಲ್ನಡಿಗೆ ಮೂಲಕ ತೆರಳಬೇಕಿದೆ. ಕದರಮಂಡಲಗಿ ಕಡೆಯಿಂದ ಬರುವ ವಾಹನಗಳನ್ನು ದರ್ಗಾದ ಬಳಿ, ಬಿಸಲಹಳ್ಳಿ, ಶಿಕಾರಿಪುರ, ರಟ್ಟಿಹಳ್ಳಿ ಕಡೆಗೆ ತೆರಳುವ ವಾಹನಗಳನ್ನು ಕಲಾಭವನ ಬಳಿ ನಿಲ್ಲಿಸಲಾಗುತ್ತಿದೆ. ಬಹುತೇಕ ಸಾರ್ವಜನಿಕರು ಮಾರ್ಗ ಬದಲಾವಣೆ ಗೊತ್ತಿಲ್ಲದೆ ಗೊಣಗುತ್ತ ಸಂಚರಿಸುತ್ತಿದ್ದಾರೆ.
ಬಸ್‌ಗಾಗಿ ಪರದಾಟ
ಬಸ್ ನಿಲ್ದಾಣಕ್ಕೆ ಸ್ಥಳೀಯ ಬಸ್ ಸೇರಿದಂತೆ ವೇಗದೂತ ಬಸ್‌ಗಳು ಬಾರದ್ದರಿಂದ ಪ್ರಯಾಣಿಕರು ಬೆಳಗ್ಗೆ ಬಸ್ ನಿಲ್ದಾಣಕ್ಕೆ ಆಗಮಿಸಿ, ವ್ಯವಸ್ಥಾಪಕರ ಸೂಚನೆಯಂತೆ ವಾಪಸ್ ತೆರಳಿದರು. ನಿಲ್ದಾಣದಿಂದ ಹಾವೇರಿ ಕಡೆಗೆ ತೆರಳುವ ಎಲ್ಲ ಪ್ರಯಾಣಿಕರು ಹಳೇಪೊಲೀಸ್ ಠಾಣೆ ಬಳಿ ಕಾಲ್ನಡಿಗೆಯಲ್ಲಿ ತೆರಳಿದರು. ಆಟೋಗಳಿಗೆ ಸಿಲಿಂಡರ್ ಸಮಸ್ಯೆಯಿಂದ ದರ ಹೆಚ್ಚಳವಾಗಿದ್ದು, ಪ್ರಯಾಣಿಕರ ಓಡಾಟ ಈಗ ಇನ್ನಷ್ಟು ದುಬಾರಿಯಾಗಿದೆ. ವೃದ್ಧರು, ಅಂಗವಿಕಲರು, ಮಹಿಳೆಯರು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು.
ಮುಖ್ಯರಸ್ತೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದ್ದು, ಇನ್ನುಳಿದಂತೆ ಕೆಲ ಕಟ್ಟಡಗಳನ್ನು ಮಾಲೀಕರೇ ಸ್ವಯಂಪ್ರೇರಿತರಾಗಿ ತೆರವು ಮಾಡಿಕೊಳ್ಳುವ ಮೂಲಕ ಸಹಕಾರ ನೀಡುತ್ತಿದ್ದಾರೆ. ತೆರವುಗೊಂಡ ಕಟ್ಟಡಗಳ ಅವಶೇಷಗಳ ಸ್ಥಳಾಂತರ ನಡೆದಿದೆ. ಪೊಲೀಸ್, ಕಂದಾಯ, ಸರ್ವೇ, ಪುರಸಭೆ, ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಎರಡು ದಿನಗಳಿಂದ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಯೋನ್ಮುಖರಾಗಿದ್ದೇವೆ.
— ವಿನಯಕುಮಾರ ಹೊಳೆಪ್ಪಗೋಳ ಪುರಸಭೆ ಮುಖ್ಯಾಧಿಕಾರಿ
ಬ್ಯಾಡಗಿಯ ಗಜೇಂದ್ರಗಡ-ಸೊರಬ ಹೆದ್ದಾರಿ ಎರಡೂ ಬದಿಯಲ್ಲಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದೆ. ಎರಡು ದಿನಗಳಿಂದ 100 ಕಟ್ಟಡಗಳ ತೆರವು ಕಾರ್ಯ ಪೂರ್ಣಗೊಂಡಿದ್ದು, ಇನ್ನುಳಿದ ಕಟ್ಟಡಗಳನ್ನು ತೆರವು ಮಾಡಲಾಗುವುದು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದಷ್ಟು ಜಾಗವನ್ನು ನಾವು ಕಬ್ಜಾ ಪಡೆದುಕೊಂಡು ತೆರವು ಮಾಡುತ್ತಿದ್ದೇವೆ. ಎಲ್ಲ ಪ್ರಕ್ರಿಯೆಗಳು ಕ್ರಮಬದ್ಧವಾಗಿ ನಡೆದಿದ್ದು, ಭೂಮಾಲೀಕರು ಹಾಗೂ ಸಾರ್ವಜನಿಕರ ಸಹಕಾರ ನೀಡುತ್ತಿದ್ದಾರೆ.
— ಆಂಜನೇಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ