ಬಂಕಾಪುರ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷೆ ಮಮತಾ ಮಾಗಿ 4.16 ಲಕ್ಷ ರೂ.ಉಳಿತಾಯದ ಬಜೆಟ್ ಮಂಡಿಸಿದರು. ಮುಖ್ಯಾಧಿಕಾರಿ ಶಿವಾನಂದ ಅಜ್ಜನ್ನವರ, ಆಯೂಬಖಾನ ಪಠಾಣ, ಬಿ.ಎಸ್.ಗಿಡ್ಡನ್ನವರ ಇದ್ದರು.
ವಿಜಯವಾಣಿ ಸುದ್ದಿಜಾಲ ಬಂಕಾಪುರ
ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಪುರಸಭೆ ಅಧ್ಯಕ್ಷೆ ಮಮತಾ ಮಾಗಿ 2026-27ನೇ ಸಾಲಿನ 4.16 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಪ್ರಸಕ್ತ ವರ್ಷ ರಾಜಸ್ವ ಖಾತೆಯಲ್ಲಿ 2.64 ಕೋಟಿ ರೂ. ಸಂಗ್ರಹ ಗುರಿ ಹೊಂದಲಾಗಿದೆ. ಅದರಲ್ಲಿ ನೀರಿನ ಕರ 40.11 ಲಕ್ಷ ರೂ., ಆಸ್ತಿ ತೆರಿಗೆ ವಸೂಲಾತಿಯಿಂದ 87.71 ಲಕ್ಷ ರೂ., ವ್ಯಾಪಾರ ಪರವಾನಗಿಯಿಂದ 2.35 ಲಕ್ಷ ರೂ., ಸಂತೆ ಮತ್ತು ಮಾರುಕಟ್ಟೆ ಹರಾಜಿನಿಂದ 15 ಲಕ್ಷ ರೂ., ಅಭಿವೃದ್ಧಿ ಶುಲ್ಕ 35 ಲಕ್ಷ ರೂ., ಎಸ್.ಡಬ್ಲುೃ.ಎಂ ಶುಲ್ಕದಿಂದ 13 ಲಕ್ಷ ರೂ., ಇತರ ಮೂಲಗಳಿಂದ 71 ಲಕ್ಷ ರೂ. ಆದಾಯದ ಮೂಲ ಹೊಂದಲಾಗಿದೆ. ಮುಕ್ತ ನಿಧಿ ಅನುದಾನ 25 ಲಕ್ಷ ರೂ., ವೇತನ ನಿಧಿ ಅನುದಾನ 1.94 ಕೋಟಿ ರೂ., ವಿದ್ಯುತ್ ಬಿಲ್ ಅನುದಾನ 1.68 ಕೋಟಿ ರೂ., ಕುಡಿಯುವ ನೀರಿನ ಪರಿಹಾರ ಅನುದಾನ 20 ಲಕ್ಷ ರೂ., ನೇರ ಪಾವತಿ ಪೌರ ಕಾರ್ಮಿಕರ ವೇತನ 40 ಲಕ್ಷ ರೂ. ಸೇರಿದಂತೆ 4.47 ಕೋಟಿ ರೂ. ರಾಜಸ್ವ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದರು.
ಸರ್ಕಾರದ ವಿಶೇಷ ಅನುದಾನದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ 50 ಲಕ್ಷ ರೂ., ಪೌರಕಾರ್ಮಿಕರ ಗೃಹಭಾಗ್ಯ ಅನುದಾನ 10 ಲಕ್ಷ ರೂ., ಘನತ್ಯಾಜ್ಯ ವಸ್ತು ವಿಲೇವಾರಿ ನಿರ್ವಹಣೆ ಅನುದಾನ 10 ಲಕ್ಷ ರೂ., ವಿಶೇಷ ಅನುದಾನ 10 ಕೋಟಿ ರೂ.ದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಬಡ ಜನತೆ ಕಲ್ಯಾಣ ಯೋಜನೆಗೆ 2.47 ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ಕುಡಿಯುವ ನೀರು, ಪಟ್ಟಣದ ಸ್ವಚ್ಛತೆ, ರಸ್ತೆ, ವಿದ್ಯುತ್ ದೀಪ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ, ಜನಪರ ಕಾರ್ಯಗಳನ್ನು ಮಾಡಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನ್ನವರ, ಸ್ಥಾಯಿ ಸಮಿತಿ ಅಧ್ಯಕ್ಷ ಅಯೂಬಖಾನ ಪಠಾಣ, ಪುರಸಭೆ ಸದಸ್ಯರಾದ ತಹಮಿದ ಖಾಜಿ, ನಾಸೀರಹಮ್ಮದ ಹಲ್ಡೆವಾಲೆ, ರಾಜಶೇಖರ ಬಡ್ಡಿ, ರಾಜು ಟೋಪಣ್ಣವರ, ಬಸವರಾಜ ಕಟ್ಟಿಮನಿ, ದುರ್ಗಾರಾಮ ಉಥಳೆಕರ, ಮಾಲತೇಶ ಅಗಡಿ, ಬಿ.ಎಸ್. ಗಿಡ್ಡಣ್ಣವರ, ಬಸಮ್ಮ ಕೊರಕಲ್, ಸತೀಶ ತಳವಾರ ಇತರರಿದ್ದರು.