ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜನಸೇವೆಯ 50 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಅಭಿಮಾನೋತ್ಸವ ಕಾರ್ಯಕ್ರಮದ ಸಿದ್ಧತೆ ಕುರಿತು ಹಾನಗಲ್ಲಿನಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿದರು. ಶಿವರಾಜ ಸಜ್ಜನರ, ಭೋಜರಾಜ ಕರೂದಿ, ಭರತ್ ಬೊಮ್ಮಾಯಿ ಇದ್ದರು. 
ಹಾವೇರಿ

ಬಿಎಸ್‌ವೈ ಅಭಿನಂದನೆ ಕಾರ್ಯಕ್ರಮ ಕಣ್ತುಂಬಿಕೊಳ್ಳಿ

ಮಂಜುನಾಥ ಗದಗಿನ
ಹಾನಗಲ್ಲ: ಭಾರತೀಯ ಜನತಾ ಪಕ್ಷದ ಸಂಘಟನೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿರುವ ಬಿ.ಎಸ್. ಯಡಿಯೂರಪ್ಪನವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು 50 ವರ್ಷಗಳು ಸಂದಿರುವ ಸಂದರ್ಭದಲ್ಲಿ ಅವರನ್ನು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಅಭಿನಂದಿಸುವ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಮನವಿ ಮಾಡಿದರು.
ಚಿತ್ರದುರ್ಗದಲ್ಲಿ ಮೇ 9 ರಂದು ಆಯೋಜಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನಸೇವೆಯ 50
ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಪಟ್ಟಣದ ಸಾವಿತ್ರಮ್ಮ ಉದಾಸಿ ಕಲ್ಯಾಣ ಮಂಟಪದಲ್ಲಿ ಅಭಿಮಾನೋತ್ಸವ ಕಾರ್ಯಕ್ರಮದ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಜನತೆಗೆ ಬಿಎಸ್‌ವೈ ಅವರ ಕೊಡುಗೆಗಳು ಮತ್ತು ರೈತಪರವಾದ ಹೋರಾಟಗಳು, ಪಕ್ಷ ಸಂಘಟನೆ ಇಂಥ ಹಲವು ಕಾರ್ಯಗಳನ್ನು ನೆನಪಿಸುವ ಅಭೂತಪೂರ್ವ ಕಾರ್ಯಕ್ರಮ ಇದಾಗಲಿದೆ. ಅವರು ದಾಪುಗಾಲುಗಳನ್ನು ಸ್ಮರಿಸುವ ಅವಕಾಶ ನಮ್ಮೆಲ್ಲರಿಗೂ ಒದಗಿಬಂದಿದೆ. ಇಂಥ ಕ್ಷಣಗಳನ್ನು ರಾಜ್ಯದ ಜನತೆ ಕಣ್ಮುಂಬಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜನತಾ ಪಕ್ಷದ ಹಾನಗಲ್ಲ ಮಂಡಲದ ಅಧ್ಯಕ್ಷ ಮಹೇಶ ಕಮಡೊಳ್ಳಿ ಮಾತನಾಡಿ, ತಾಲೂಕಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 25 ಬಸ್ ಹಾಗೂ 100 ಕಾರು ಬಿಎಸ್‌ವೈ ಅಭಿಮಾನೋತ್ಸವಕ್ಕೆ ತೆರಳಲು ಕಾರ್ಯಕರ್ತರಿಗೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಅಭಿಮಾನೋತ್ಸವದ ಯಶಸ್ಸಿಗಾಗಿ ಎಲ್ಲರೂ ಕೈ ಜೋಡಿಸೋಣ ಎಂದು ಕರೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ವಿಭಾಗ ಸಹ ಪ್ರಭಾರಿ ಭೋಜರಾಜ ಕರೂದಿ, ಮುಖಂಡರಾದ ಭರತ್ ಬೊಮ್ಮಾಯಿ ಮತ್ತು ಪಕ್ಷದ ಪಧಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.