ಹಾವೇರಿ: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಮಳೆ ಕೊರತೆಯಿಂದ ಹಾಳಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವುದು ಸೇರಿ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಭಾರತೀಯ ಜನತಾ ಪಾಟಿರ್ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಲ್ಲಿ ರೈತರು ಅನೇಕ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪಕ್ಷದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಮಳೆ ಕೊರತೆಯಿಂದ ರೈತರು ಬೆಳೆ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಸಮರ್ಪಕ ಬೆಳೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಇದರೊಂದಿಗೆ ರೈತರ ಪಂಪ್ಸೆಟ್ಗಳಿಗೆ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ಯಾವುದೇ ವಿಳಂಬವಿಲ್ಲದೆ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿವಿಧ ಕೆರೆಗಳನ್ನು ಭತಿರ್ ಮಾಡುವ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಕೃಷಿಗೆ ಅಗತ್ಯವಾದ ನೀರಿನ ಲಭ್ಯತೆಯನ್ನು ಖಚಿತಪಡಿಸಬೇಕು.
ಅಸುಂಡಿ ಹಾಗೂ ಆಣೂರು ಏತ ನೀರಾವರಿ ಯೋಜನೆಗಳನ್ನು ಶೀಘ್ರ ರ್ಪೂಣಗೊಳಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಬೇಕು. ಜಿಲ್ಲೆಯ ಕೃಷಿ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲ ನೀರಾವರಿ ಯೋಜನೆಗಳಿಗೆ ವೇಗ ನೀಡಬೇಕು. ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ, ಮಾಜಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ರಾಮಣ್ಣ ಮಾಳಗಿ, ಕಿರಣ ಕೊಳ್ಳಿ, ಜಗದೀಶ್ವರಗೌಡ ಲಕ್ಕನಗೌಡ್ರ, ಮೃತ್ಯುಂಜಯ ಮುಷ್ಠಿ, ಹನುಮಂತಗೌಡ ಮುದಿಗೌಡ್ರ, ಪರಮೇಶಪ್ಪ ಗೂಳಣ್ಣನವರ, ಸುರೇಶ ದ್ಯಾವಕ್ಕಳವರ, ಡಾ. ಸಂತೋಷ ಆಲದಕಟ್ಟಿ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುನಾಥ ತಾಂಡೂರ, ದರಿಯಪ್ಪಗೌಡ ಪಾಟೀಲ, ಅಜ್ಜಯ್ಯಸ್ವಾಮಿ ಆರಾಧ್ಯಮಠ ಮತ್ತಿತರರು ಉಪಸ್ಥಿತರಿದ್ದರು.