ಸವಣೂರು ಪಟ್ಟಣದ ಹೊರ ವಲಯದ ಕೃಷಿ ಜಮೀನಿನಲ್ಲಿ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿರುವುದು.  
ಹಾವೇರಿ

Agriculture: ರೈತರ ಬಿತ್ತನೆಗೆ ತಣ್ಣೀರೆರಚಿದ ಕೊರತೆ

ಸವಣೂರು: ತಾಲೂಕಿನಲ್ಲಿ ಬಿತ್ತನೆ ಕಾರ್ಯದಲ್ಲಿ ಅನ್ನದಾತರು ನಿರತರಾಗಿದ್ದಾರೆ.ಆದರೆ, ಡಿಎಪಿ ಗೊಬ್ಬರ ಹಾಗೂ ಸೋಯಾಬೀನ್ ಬಿತ್ತನೆ ಬೀಜ ಕೊರತೆ ಹೆಚ್ಚಾಗಿದ್ದು, ಇದು ರೈತರ ಬಿತ್ತನೆ ಹುಮ್ಮಸಿಗೆ ತಣ್ಣೀರೆರಚಿದೆ.
ತಾಲೂಕಿನಲ್ಲಿ ಈ ಹಿಂದೆ ಅತಿ ಹೆಚ್ಚು ಗೋವಿನಜೋಳ ಬಿತ್ತನೆ ಕೈಗೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಸೋಯಾಬೀನ್ ಹಾಗೂ ಶೇಂಗಾ (ಶೇ. 40 ರಿಂದ 50 ರಷ್ಟು) ಹೆಚ್ಚು ಬಿತ್ತನೆಗೆ ಮುಂದಾಗಿದ್ದಾರೆ. ಉಳಿದಂತೆ ತೊಗರಿ ಹಾಗೂ ಹೆಸರು ಸೇರಿದಂತೆ ವಿವಿಧ ಬೆಳೆಗಳನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶೇ.12 ರಿಂದ 15ರಷ್ಟು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಮುಂದಿನ ಒಂದು ವಾರದಲ್ಲಿ ಸಂಪೂರ್ಣ ಬಿತ್ತನೆ ಸಂಪನ್ನಗೊಳಿಸಲು ಕಾರ್ಯದಲ್ಲಿ ಮಗ್ನರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 44 ಸಾವಿರ ಹೆಕ್ಟೇರ್ ಕೃಷಿಭೂಮಿ ಬಿತ್ತನೆ ಗುರಿ ಹೊಂದಲಾಗಿದೆ.
ರಾಸಾಯಿಕ ಗೊಬ್ಬರ ಬಳಕೆ: ಡಿಎಪಿ ಗೊಬ್ಬರ ನಿಧಾನಗತಿಯಲ್ಲಿ ಸರಬರಾಜುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗೊಂದಲಕ್ಕೆ ಈಡಾಗಿದ್ದ ರೈತರು, ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೇರಿಗೆ ಡಿಎಪಿ ಬದಲಾಗಿ ಇತರ ರಾಸಾಯಿಕ ಗೊಬ್ಬರ ಬಳಕೆಯೊಂದಿಗೆ ಬಿತ್ತನೆಗೆ ಮುಂದಾಗುತ್ತಿರುವುದು ಗೊಂದಲಕ್ಕೆ ತೆರೆ ಎಳೆಯುವಂತಾಗಿದೆ.
ಸರಬರಾಜಿಲ್ಲ: ತಾಲೂಕಿನಲ್ಲಿರುವ ಒಟ್ಟು 44 ಸಾವಿರ ಹೆಕ್ಟೇರ್ ಕೃಷಿಭೂಮಿ ಬಿತ್ತನೆ ಗುರಿಗೆ ಅವಶ್ಯವಾಗಿರುವ ಅಂದಾಜು 3200 ಕ್ವಿಂಟಾಲ್ ಬಿತ್ತನೆ ಬೀಜ(ಮೆಕ್ಕೆಜೋಳ, ಹೆಸರು, ಸೋಯಾಬೀನ್, ಶೇಂಗಾ, ತೊಗರಿ ಸೇರಿದಂತೆ)ದಲ್ಲಿ 1893 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನುಗೊಳಿಸಲಾಗಿದೆ. ಅದರಲ್ಲಿ ಈಗಾಗಲೇ 630 ಕ್ವಿಂಟಾಲ್ ಬಿತ್ತನೆ ಬೀಜ ಮಾರಾಟಗೊಂಡಿದೆ. ರೈತರ ಅವಶ್ಯಕತೆಗೆ ಅನುಗುಣವಾಗಿ ಬಿತ್ತನೆ ಬೀಜ ಸರಬರಾಜು ಕೈಗೊಳ್ಳಲಾಗುತ್ತಿದೆ ಎಂಬುವದು ಕೃಷಿ ಇಲಾಖೆ ಅಧಿಕಾರಿಗಳ ಸಮಜಾಯಿಯಾಗಿದ್ದರೆ, ತಾಲೂಕಿನಲ್ಲಿ ಸೂಕ್ತ ಸಮಯಕ್ಕೆ ಬಿತ್ತನೆ ಬೀಜ ಹಾಗೂ ಗೊಬ್ಬರ ದೊರೆಯದ ಕಾರಣ ಬಿತ್ತನೆ ಕಾರ್ಯ ವಿಳಂಬವಾಗುತ್ತಿದೆ. ಸೋಯಾಬೀನ್ ಬಿತ್ತನೆಗೆ ಮುಂದಾಗಿರುವ ರೈತರಿಗೆ ಕೃಷಿ ಇಲಾಖೆಯಲ್ಲಿ ಸರಬರಾಜುಗೊಳ್ಳುವವರಿಗೂ ಸೋಯಾಬೀನ್ ಬಿತ್ತನೆ ಬೀಜ ಎನ್ನುತ್ತಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಾವಯವ ಬೆಳೆ ಹೆಚ್ಚಲಿ: ತಾಲೂಕಿನ ಕೆಲ ಬಾಗದಲ್ಲಿ ಹಸಿ ಹೆಚ್ಚಿಲ್ಲದ ಕಾರಣ ಬಿತ್ತನೆ ಕಾರ್ಯ ಹಿನ್ನಡೆವಾಗುತ್ತಿದೆ. ರೈತರು ತೇವಾಂಶ ಕುರಿತು ಗಮನಿಸಿ ಬಿತ್ತನೆ ಕಾರ್ಯಕ್ಕೆ ಮುಂದಾಗುವುದು ಅವಶ್ಯವಾಗಿದೆ. ಅತಿ ಕಡಿಮೆ ತೇವಾಂಶದಲ್ಲಿ ಬಿತ್ತನೆ ಕೈಗೊಳ್ಳುವುದು, ಬಿತ್ತನೆ ಸಂದರ್ಭದಲ್ಲಿ ಯೂರಿಯಾ ಗೊಬ್ಬರದಲ್ಲಿ ಕಳೆನಾಶಕವನ್ನು ಬಳಕೆ ಮಾಡುವದನ್ನು ನಿಲ್ಲಿಸಬೇಕು. ಗೊಬ್ಬರದಲ್ಲಿ ಕಳೆನಾಶಕ ಬಳಕೆಯಿಂದಾಗಿ ಭೂಮಿ ಅತ್ಯಂತ ವಿಷಯುಕ್ತವಾಗಲಿದೆ. ತಾಲೂಕಿನಲ್ಲಿ 500 ಹೆಕ್ಟೇರ್‌ಗಿಂತಲೂ ಕಡಿಮೆ ಕೃಷಿಭೂಮಿಯಲ್ಲಿ ರೈತರು ಸಾವಯವ ಬೆಳೆ ಬೆಳೆಯುತ್ತಿದ್ದಾರೆ. ಈ ಕುರಿತು ರೈತರು ಜಾಗೃತಿ ಹೊಂದುವ ಮೂಲಕ ಹೆಚ್ಚು ಹೆಚ್ಚು ಸಾವಯವ ಕೃಷಿಯಲ್ಲಿ ತೊಡಗುವುದು ಅವಶ್ಯವಾಗಿದೆ ಎಂಬುವದು ಕೃಷಿ ಇಲಾಖೆ ಅಧಿಕಾರಿಗಳ ಸಲಹೆಯಾಗಿದೆ.
"

ಬಿತ್ತನೆ ಅವಶ್ಯಕತೆಗೆ ಅನುಗುಣವಾಗಿ ಮಳೆಯಾಗದಿರುವ ಹಿನ್ನಲೆಯಲ್ಲಿ ಬಿತ್ತನೆಗೆ ರೈತರಲ್ಲಿ ಗೊಂದಲ ಮೂಡಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ದಾಸ್ತಾನುಗೊಳಿಸಲಾಗಿದೆ. ಈ ಬಾರಿ ತಾಲೂಕಿನಲ್ಲಿ ರೈತರು ಸೋಯಾಬೀನ್ ಬಿತ್ತನೆಗೆ ಹೆಚ್ಚಾಗಿ ಮುಂದಾಗಿರುವ ಹಿನ್ನಲೆಯಲ್ಲಿ ಸೋಯಾಬೀನ್ ಕೊರತೆ ಉಂಟಾಗಿದೆ. ಸೋಯಾಬೀನ್ ಬಿತ್ತನೆ ಬೀಜಕ್ಕಾಗಿ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಸರಬರಾಜುಗೊಂಡ ತಕ್ಷಣ ರೈತರಿಗೆ ವಿತರಿಸಲಾಗುವುದು.

— ಸವಿತಾ ಚಕ್ರಸಾಲಿ ಸವಣೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ