ವಿಎಒ ಪರೀಕ್ಷೆ ಟಾಪರ್ ಶಂಕರ ಬನ್ನೂರ ಅಕ್ರಮ ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ. 
ಹಾವೇರಿ

VAO ಟಾಪರ್ ಶಂಕರ್​ ಬನ್ನೂರ ಕಳ್ಳಾಟಕ್ಕೆ ಬಿಗ್ ಟ್ವಿಸ್ಟ್: 'ಅವನು ಪರೀಕ್ಷೆಗೆ ಹಾಜರಿರಲಿಲ್ಲ' ಎಂದ ಯುವಕ; ಹಾವೇರಿ ಎಸ್ಪಿ ಕೊಟ್ಟ ಸ್ಪಷ್ಟನೆ ಏನು? Shankar Bannur

ಹಾವೇರಿ: ಇತ್ತೀಚೆಗೆ ಕೆಇಎ ವತಿಯಿಂದ ನಡೆಸಲಾಗಿದ್ದ ಗ್ರಾಮ ಆಡಳಿತ ಅಧಿಕಾರಿ (VAO) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಶಂಕರ ಬನ್ನೂರ ಎಂಬಾತನ ಕಳ್ಳಾಟ ಬಯಲಾಗಿದ್ದು, ಈ ಪ್ರಕರಣದ ಕುರಿತಾದ ತನಿಖೆ ಚುರುಕಾಗಿದೆ.

ಕೆಎಸ್​ಆರ್​ಪಿ ಪೊಲೀಸ್​ ಕಾನ್ಸ್​ಟೇಬಲ್​ ಪರೀಕ್ಷೆಯಲ್ಲಿ ಕೇವಲ 25 ಅಂಕಗಳನ್ನು ಪಡೆದಿದ್ದ ಶಂಕರ​ ಬನ್ನೂರ, ವಿಎಒ ಪರೀಕ್ಷೆಯಲ್ಲಿ ಭರ್ತಿ 151 ಅಂಕಗಳನ್ನು ಪಡೆದು ಟಾಪರ್​ನಾಗಿ ಹೊರಹೊಮ್ಮಿದ್ದ. ಈ ಬೆಳವಣಿಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ವಿಚಾರಣೆ ನಡೆಸಿದಾಗ, ಇವನು ಮೊಬೈಲ್​ಸಹಾಯದಿಂದ ನಕಲು ಮಾಡಿದ್ದಾಗಿ ತಿಳಿದುಬಂದಿದೆ.

ಅವನು ಪರೀಕ್ಷೆಗೆ ಬಂದೇ ಇಲ್ಲ!

ಈ ಪ್ರಕರಣ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾದ ಸಂದರ್ಭದಲ್ಲಿ, ಸತೀಶ ಲಮಾಣಿ ಎಂಬ ಯುವಕ, ನಾನು ವಿಎಒ ಪರೀಕ್ಷೆ ನಡೆದ ದಿನ ಶಂಕರ ಬನ್ನೂರಿನ ಸಹಪರೀಕ್ಷಾರ್ಥಿ ಆಗಿದ್ದೆ. ಆದರೆ ಆತ ಪರೀಕ್ಷೆಗೆ ಹಾಜರಾಗಿಯೇ ಇರಲಿಲ್ಲ. ಅನವ ಸ್ಥಳ ಖಾಲಿಯಾಗಿಯೇ ಉಳಿದಿತ್ತೆಂದು ಹೊಸ ಬಾಂಬ್​ ಸಿಡಿಸಿದ್ದಾರೆ. ನನ್ನ ಆರೋಪ ಏನಾದರೂ ಸುಳ್ಳಾಗಿದ್ದರೆ, ಪರೀಕ್ಷಾ ಕೊಠಡಿಯ ಸಿಸಿಟಿವಿ ವಿಡಿಯೋವನ್ನು ಬಿಡುಗಡೆ ಮಾಡಿ ಆಗ ಎಲ್ಲಾ ಗೊಂದಲಗಳಿಗೆ ಪರಿಹಾರ ಸಿಗುತ್ತದೆ ಎಂದು ಸವಾಲನ್ನು ಎಸೆದಿದ್ದಾನೆ.

ಸುಳ್ಳು ಆರೋಪ ಮಾಡಬೇಡಿ!

ಈ ಸತೀಶ ಲಮಾಣಿಯ ಆರೋಪಗಳನ್ನು ತಳ್ಳಿ ಹಾಕಿರುವ ಹಾವೇರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಯಶೋಧಾ ವಂಟಗೋಡಿ ಆರೋಪಿ ಶಂಕರ್​ ಬನ್ನೂರ ಮೊಬೈಲ್​ ನೋಡಿಕೊಂಡು ಪರೀಕ್ಷೆ ಬರೆದ ಕಾರಣಕ್ಕಾಗಿಯೇ ಎಫ್​ಐಆರ್​ ದಾಖಲಿಸಲಾಗಿದೆ. ಆದ್ದರಿಂದ ಸುಮ್ಮನೆ ಸುಳ್ಳು ಆರೋಪಗಳನ್ನು ಹಬ್ಬಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದೂರನ್ನು ಬಂದ ನಂತರ, ಆರೋಪಿ ಪರೀಕ್ಷೆ ಬರೆದಿದ್ದ ಪರೀಕ್ಷಾ ಕೇಂದ್ರದ ಸಿಸಿಟಿವಿ ವಿಡಿಯೋವನ್ನು ನೋಡಲಾಗಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕವೇ ಶಂಕರ ಬನ್ನೂರು ಮೊಬೈಲ್ ನೋಡಿ ಪರೀಕ್ಷೆ ಬರೆದಿರುವುದು ಖಚಿತವಾಗಿದ್ದು, ಈ ಆಧಾರದ ಮೇಲೆಯೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ತನಿಖೆಯಲ್ಲಿ ದಾಖಲೆಗಳೇ ನಿರ್ಣಾಯಕ

ಒಂದೆಡೆ ಸಹಪರೀಕ್ಷಾರ್ಥಿಯ ಹೇಳಿಕೆ, ಮತ್ತೊಂದೆಡೆ ಸಿಸಿಟಿವಿ ಪರಿಶೀಲನೆಯ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ಎಸ್ಪಿ ನೀಡಿರುವ ಸ್ಪಷ್ಟನೆ ಪ್ರಕರಣದ ಕುತೂಹಲ ಹೆಚ್ಚಿಸಿದೆ. ಪರೀಕ್ಷಾ ಕೊಠಡಿಯ ಹಾಜರಾತಿ ದಾಖಲೆ, ಆಸನ ವ್ಯವಸ್ಥೆ, ಸಿಸಿಟಿವಿ ದೃಶ್ಯಾವಳಿ ಹಾಗೂ ಮೇಲ್ವಿಚಾರಕರ ಹೇಳಿಕೆಗಳ ಆಧಾರದಲ್ಲಿ ಪ್ರಕರಣದ ಎಲ್ಲ ಆಯಾಮಗಳೂ ಬೆಳಕಿಗೆ ಬರಬೇಕಿದೆ. ಮೊಬೈಲ್ ಬಳಸಿ ಪರೀಕ್ಷೆ ಬರೆದ ಆರೋಪ, ಸಹಪರೀಕ್ಷಾರ್ಥಿಯ ಹೇಳಿಕೆ ಮತ್ತು ಪೊಲೀಸ್ ಇಲಾಖೆಯ ಸ್ಪಷ್ಟನೆಗಳ ನಡುವಿನ ಗೊಂದಲಕ್ಕೆ ಸಮಗ್ರ ತನಿಖೆಯಿಂದ ತೆರೆ ಬೀಳಬೇಕಿದೆ.