ಸವಣೂರ ಪಟ್ಟಣದ ಹೊರವಲಯದ ವೀಳ್ಯದೆಲೆ ((betel leaf))ತೋಟ ಹಾಳಾಗಿರುವುದು.
ಸವಣೂರ: ಚಳಿ ಪ್ರಮಾಣ ಹೆಚ್ಚಾಗಿದ್ದರಿಂದ ಎಲೆಬಳ್ಳಿ (betel leaf) ತೋಟದಲ್ಲಿ ಬೆಂಕಿರೋಗ, ಬೂದಿರೋಗ ಕಾಣಿಸಿಕೊಂಡು ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಸವಣೂರ ಹೋಬಳಿಯ ಪಟ್ಟಣ ವ್ಯಾಪ್ತಿ, ತಾಲೂಕಿನ ಕಾರಡಗಿ, ಮಾದಾಪೂರ, ಚಿಲ್ಲೂರ, ಬಡ್ನಿ, ಹೊಸಳ್ಳಿ, ಗುಂಡೂರ, ಗೋನಾಳ, ಚೌಡಾಳ, ಬೇವಿನಹಳ್ಳಿ, ಕಳಲಕೊಂಡ, ಜಲ್ಲಾಪೂರ ಹಾಗೂ ಹತ್ತಿಮತ್ತೂರ ಹೋಬಳಿಯ ನಾಯಿಕೆರೂರ, ಹತ್ತಿಮತ್ತೂರ, ಶಿರಬಡಗಿ, ಹೂವಿನಶಿಗ್ಲಿ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ೩೦೦೦ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಯಾಗಿರುವ ವೀಳ್ಯದೆಲೆ ಬೆಳೆಯಲಾಗುತ್ತಿದೆ.
ವೀಳ್ಯದೆಲೆಗೆ ಸೂರ್ಯನ ಕಿರಣ ಅಗತ್ಯ. ಪ್ರಸ್ತುತ ಚಳಿಗಾಲ ಆರಂಭದಲ್ಲಿ ಉಷ್ಣಾಂಶ ೧೦ರಿಂದ ೧೫ ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿತ್ತು. ಇದರ ಪರಿಣಾಮ ವೀಳ್ಯದೆಲೆ ತೋಟಗಳ ಮೇಲೆ ಆಗಿದೆ. ಚಳಿಗಾಲದ ಆರಂಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಸಿಲು ಇರದ ಕಾರಣ ವೀಳ್ಯದೆಲೆ ಬಳ್ಳಿಗಳಲ್ಲಿ ಬೆಂಕಿರೋಗ, ಬೂದಿರೋಗ ಕಾಣಿಸಿಕೊಂಡಿತು. ಇದರಿಂದಾಗಿ ಎಲೆಗಳು ಒಣಗುವುದು, ಗಡುಸು ಆದವು. ಇದರಿಂದಾಗಿ ಇಳುವರಿ ಮೇಲೆ ನೇರ ಪ್ರಭಾವವಾಯಿತು.
ಸವಣೂರ ನವಾಬರ ಕಾಲದಿಂದಲೂ ವೀಳ್ಯದೆಲೆ ಕೃಷಿ ನಡೆಯುತ್ತಿದೆ. ಇಲ್ಲಿನ ವೀಳ್ಯದೆಲೆ ತನ್ನ ಮೃದುತ್ವದಿಂದಾಗಿ ಖ್ಯಾತಿ ಹೊಂದುವ ಜತೆಗೆ ಅತಿ ಹೆಚ್ಚು ಬೇಡಿಕೆ ಕಾಯ್ದುಕೊಂಡಿದೆ. ಬಳ್ಳಿಯಿಂದ ವೀಳ್ಯದೆಲೆ ಕತ್ತರಿಸಿ ಪೆಂಡಿಗಳಲ್ಲಿ ಕಟ್ಟಲಾಗುತ್ತದೆ. ೧೨ ಸಾವಿರ ಎಲೆಗಳನ್ನಿಟ್ಟು ಒಂದು ಅಂಡಿಗೆ (ಪೆಂಡಿ) ಕಟ್ಟಲಾಗುತ್ತದೆ. ಇಂತಹ ಒಂದು ಅಂಡಿಗೆ ೬ರಿಂದ ೧೨ ಸಾವಿರ ರೂಪಾಯಿವರೆಗೆ ಮಾರಾಟ ಆಗುತ್ತಿತ್ತು. ಪ್ರಸ್ತುತ ಉತ್ತಮವಾದ ವೀಳ್ಯದೆಲೆ ಅಂಡಿಗೆ ೧೮ ಸಾವಿರ ರೂಪಾಯಿವರೆಗೆ ಮಾರಾಟ ಆಗುತ್ತಿದೆ. ಹೀಗಾಗಿ, ರೈತರು ಇಳುವರಿ ಕುಂಠಿತದಿAದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.
ಸವಣೂರ ಎಪಿಎಂಸಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕಿನ ಕಾರಡಗಿ ಗ್ರಾಮದಲ್ಲಿ ವಾರದ ಮೂರು ದಿನ ವೀಳ್ಯದೆಲೆ ಮಾರುಕಟ್ಟೆ ನಡೆಯುತ್ತದೆ. ಈ ಮಾರುಕಟ್ಟೆಗೆ ರಾಣೆಬೆನ್ನೂರ, ಹಾವೇರಿ, ಹರಿಹರ, ದಾವಣಗೆರೆ Ãರಿದಂತೆ ವಿವಿಧ ತಾಲೂಕುಗಳಿಂದ ರೈತರು ವೀಳ್ಯದೆಲೆ ತಂದು ಮಾರಾಟ ಮಾಡುತ್ತಾರೆ. ಚಳಿಯಿಂದಾಗಿ ವೀಳ್ಯದೆಲೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ ಖರೀದಿದಾರರು ಪರದಾಡುವಂತಾಗಿದೆ.
ವೀಳ್ಯದೆಲೆಗೆ ತಗಲುತ್ತಿರುವ ಬೂದಿರೋಗ, ಬೆಂಕಿರೋಗ ನಿಯಂತ್ರಣಕ್ಕೆ ಚಳಿಗಾಲ ಆರಂಭಕ್ಕೂ ಮುನ್ನ ಮುಂಜಾಗ್ರತ ಕ್ರಮ ಅನುಸರಿಸುವುದು ಅವಶ್ಯ. ಸವಣೂರ ರೈತರು ಸಾವಯವ ಪದ್ಧತಿಯಡಿ ಮೃದು ವೀಳ್ಯೆದೆಲೆ ಬೆಳೆಯುತ್ತಿದ್ದಾರೆ. ಹಾಗಾಗಿ, ಬೇವಿನ ಎಣ್ಣೆ ಸಿಂಪಡಣೆ ಹಾಗೂ ತಿಪ್ಪೆಗೊಬ್ಬರ ಬಳಕೆಯಿಂದ ಬೂದಿರೋಗ ತಡೆಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಅಽಕಾರಿಗಳು ಮಾಹಿತಿ ನೀಡುತ್ತಾರೆ.
ಪ್ರತಿವರ್ಷ ಚಳಿಗೆ ವೀಳ್ಯದೆಲೆ ಬೆಳೆಗಾರರು ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವುದು ಸಾಮಾನ್ಯವಾಗಿದೆ. ಆದ್ದರಿಂದ, ಕೇಂದ್ರ ಸರ್ಕಾರದ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಸಮೀಕ್ಷೆ ಕೈಗೊಂಡು ವೀಳ್ಯದೆಲೆ ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.
| ಎಸ್.ಎನ್. ಶಾಮಣ್ಣ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಸವಣೂರ.
ಚಳಿಗೆ ವೀಳ್ಯದೆಲೆ ಇಳುವರಿ ಸಂಪೂರ್ಣ ಕುಸಿತಗೊಂಡ ವ್ಯಾಪಾರ-ವಹಿವಾಟು ನೆಲಕಚ್ಚಿ ಬೆಳೆಗಾರರು ಹಾಗೂ ಮಾರಾಟಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಇತರೆ ಬೆಳೆಗಳಿಗೆ ನೀಡುವಂತೆ ವೀಳ್ಯದೆಲೆಗೂ ಬೆಳೆ ಹಾನಿ ಪರಿಹಾರ ಘೋಷಣೆಗೆ ಸರ್ಕಾರ ಮುಂದಾಗಬೇಕು. ಈ ಕುರಿತು ಅಽಕಾರಿಗಳು ಬೆಳೆ ಹಾನಿ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
| ಬಾಬಾಹುಸೇನ್ ಗೌಡಗೇರಿ, ವೀಳ್ಯದೆಲೆ ಬೆಳೆಗಾರ, ಸವಣೂರ.