ಜಿಲ್ಲೆ

ಆರೋಗ್ಯಕ್ಕಿಂತ ಯಾವುದೂ ಮುಖ್ಯವಲ್ಲ; ನೌಕರರು ವ್ಯಾಯಾಮ, ವಾಯುವಿಹಾರ ಮರೆಯದಿರಿ; ಗ್ರಾಪಂ ನೌಕರರ ಕ್ರೀಡಾಕೂಟದಲ್ಲಿ ರುಚಿ ಬಿಂದಲ್ ಹೇಳಿಕೆ

ಹಾವೇರಿ: ಒತ್ತಡದ ವೃತ್ತಿ ಜೀವನದಲ್ಲಿ ಪ್ರತಿ ನೌಕರರು ವ್ಯಾಯಾಮ ಮತ್ತು ವಾಯುವಿಹಾರಕ್ಕೆ ಸಮಯ ಮೀಸಲಿಡಬೇಕು. ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಿದರೆ ಅನಾರೋಗ್ಯ ನಿಮ್ಮ ಬಳಿ ಸುಳಿಯುವುದಿಲ್ಲ. ಆರೋಗ್ಯಕ್ಕಿಂತ ಯಾವುದೂ ಮುಖ್ಯವಲ್ಲ ಎಂಬುದನ್ನು ಮರೆಯದಿರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಸಲಹೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಶುಕ್ರವಾರ, ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೌಕರರು ಆರೋಗ್ಯಕ್ಕೆ ಮಹತ್ವ ನೀಡಿದರೆ, ಕ್ರೀಯಾಶೀಲರಾಗಿ ಕೆಲಸ ಮಾಡಬಹುದು. ಜತೆಗೆ ಕುಟುಂಬವನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡು ಹೋಗಬಹುದು. ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡು, ನೆಮ್ಮದಿಯ ವೃತ್ತಿ ಜೀವನ ನಡೆಸಬೇಕು ಎಂದರು.

ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ, ಎಲ್ಲರೂ ಸಂತಸದಿಂದ, ಉತ್ಸಾಹದಿಂದ ಎರಡು ದಿನ ಕ್ರೀಡಾಕೂಟದಲ್ಲಿ ಭಾಗವಹಿಸಿ.ಹೀಗೆ ಸದಾ ನಗು-ನಗುತಾ ಕೆಲಸ ಮಾಡಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಎರಡು ದಿನಗಳ ಕಾಲ ಕ್ರೀಡೆಯಲ್ಲಿ ಭಾಗವಹಿಸೋಣ. ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಲು ಕ್ರೀಡೆ ಸಹಕಾರಿಯಾಗಿದೆ. ಸ್ಪರ್ಧೆ ಆರೋಗ್ಯಕರವಾಗಿರಲಿ. ಸಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಿ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ.ಎಸ್ ರಂಗಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕಿ ಲತಾ, ಮೌಲಾಸಾಬ ಯಲವಿಗಿ, ಚನ್ನವೀರೇಶ ರೂಢಗಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಪಂ, ತಾಪಂ, ಗ್ರಾಪಂ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.