ಜಿಲ್ಲೆ

ಸ್ವಚ್ಛವಾಹಿನಿ ಮಹಿಳೆಯರಿಗೆ ಕೆಲಸ ಖಾಯಂಗೊಳಿಸಿ; ಎಂ.ಬಿ ನಾಡಗೌಡ

ಹಾವೇರಿ: ಗ್ರಾಮೀಣ ಪ್ರದೇಶವನ್ನು ಸ್ವಚ್ಛವಾಗಿಡುವಲ್ಲಿ ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರ ಪಾತ್ರ ಬಹುಮುಖ್ಯವಾದುದು. ಇಂತಹ ಶ್ರಮಿಕರು ಇಂದು ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದೇ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಕಾರ್ಮಿಕರನ್ನು ವೇತನ ಭದ್ರತೆ ಸೌಲಭ್ಯ ಒದಗಿಸಿ ರಾಜ್ಯ ಸರ್ಕಾರ ಖಾಯಂಗೊಳಿಸಬೇಕು ಎಂದು ಎಂ.ಬಿ ನಾಡಗೌಡ ಒತ್ತಾಯಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ತಮ್ಮ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ, ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘಟನೆ ನೇತೃತ್ವದಲ್ಲಿ ಸ್ವಚ್ಛವಾಹಿನಿ ನೌಕರರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹಳ್ಳಿಗಳ ಸ್ವಚ್ಚತೆಯ ಜವಾಬ್ದಾರಿ ನಿಭಾಯಿಸುತ್ತಿರುವ ಸ್ವಚ್ಛವಾಹಿನಿ ನೌಕರರಿಗೆ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ರಾಜ್ಯ ಸರ್ಕಾರದಿಂದ ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಡುತ್ತಿಲ್ಲ. ಸ್ವಚ್ಛವಾಹಿನಿ ವಾಹನಗಳಿಗೆ ವಿಮೆ ನವೀಕರಣ ಮಾಡುತ್ತಿಲ್ಲ. ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಸರ್ಕಾರಗಳು ಜೀವದ ಹಂಗು ತೊರೆದು ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಮಹಿಳಾ ನೌಕರರ ವೇತನವನ್ನು ಬಾಕಿ ಉಳಿಸಿಕೊಂಡಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಸರಕಾರ ಕೂಡಲೇ ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು 5 ನೇ ತಾರೀಖಿಗೆ ವೇತನ ನೀಡಬೇಕು. ಬಾಕಿ ವೇತನ ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಅನ್ನದಾನಪ್ಪ ಕೆ. ಹೆಬಸೂರು, ಬಸವರಾಜ ಪೂಜಾರ ಮಾತನಾಡಿದರು.

ಪ್ರತಿಭಟನೆಯಲ್ಲಿ ಜಗದೀಶ ಕೋಟಿ, ಸುಭಾಸ ಸೊಟ್ಟಪ್ಪನವರ, ದೀಪಾ ಛಲವಾದಿ, ಜ್ಯೋತಿ ಮಾಸೂರ, ವೀಣಾ ಮತ್ತೂರು, ಪ್ರೇಮಾ ಅಂಗಡಿ, ವೈಶಾಲಿ ಮೇವುಂಡಿ, ಸರೋಜಾ ಎಸ್., ಗೌರಮ್ಮ ಭಜಂತ್ರಿ, ಇತರರಿದ್ದರು.