ಜಿಲ್ಲೆ

ಮೊದಲು ಮಹಿಳೆಯರು ಸುಶಿಕ್ಷಿತರಾಗಬೇಕು; ನಮ್ಮಿಂದಲೇ ಬದಲಾವಣೆ ಆರಂಭವಾಗಬೇಕು; ಸಿಇಒ ರುಚಿ ಬಿಂದಾಲ್

ಹಾವೇರಿ: ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆ ಮೊದಲು ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮೊದಲು ಮಹಿಳೆ ಸುಶಿಕ್ಷಿತಳಾಗಬೇಕು. ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ-ಕರ್ನಾಟಕ ಗ್ರಾಮೀಣ ರಾಜ್ಯ ಜೀವನೋಪಾಯ ಅಭಿಯಾನ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತನ್ನ ವೈಯಕ್ತಿಕ ಶುಚಿತ್ವಕ್ಕೆ ಹಾಗೂ ಮನೆಯ ಸ್ವಚ್ಛತೆಗೆ ಮಹಿಳೆ ಆದ್ಯತೆ ನೀಡಬೇಕು. ಮಹಿಳೆಯರು ಶ್ರಮಿಜೀವಿಗಳು, ಅವರ ಪರಿಶ್ರಮಕ್ಕೆ ಪ್ರಶಂಸೆ ಸಿಗುತ್ತಿಲ್ಲ. ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ ಸಹ ಧೈರ್ಯವಾಗಿ ಎದುರಿಸಬೇಕು ಹಾಗೂ ಸದಾ ಖುಷಿಯಾಗಿರಬೇಕು ಎಂದು ಸಲಹೆ ನೀಡಿದರು.

ವಿಮೆ ಮಾಡಿಸಿ:

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೇರಿದಂತೆ ಸರ್ಕಾರ ವಿಮಾ ಯೋಜನೆಗಳನ್ನು ನೂರಕ್ಕೆ ನೂರಷ್ಟು ಮಾಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ಷತಾ ಕೆ.ಸಿ. ಮಾತನಾಡಿ, ಬಸವಣ್ಣನವರು, ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿಫುಲೆ ಅವರು ಮಹಿಳಾ ಸಮಾನತೆಗೆ ಹೋರಾಡಿದರು. ಎಲ್ಲರೂ ಮಾತಿನಲ್ಲಿ ಹೇಳುತ್ತಾರೆ ಮಹಿಳೆಗೆ ಸಮಾನ ಅವಕಾಶ ನೀಡಲಾಗಿದೆ ಎಂದು. ಆದರೆ ಇಂದಿಗೂ ಮಹಿಳೆ ಮೇಲೆ ಅತ್ಯಾಚಾರ, ದೌರ್ಜನ್ಯಗಳ ಹಾಗೂ ಆ್ಯಸಿಡ್ ದಾಳಿಗಳು ನಡೆಯುತ್ತಿರುವುದು ವಿಷಾಧದ ಸಂಗತಿಯಾಗಿದೆ. ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ದಿನನಿತ್ಯ ಹೋರಾಟ ಮಾಡುತ್ತಿದ್ದಾಳೆ ಎಂದು ಹೇಳಿದರು.

ಜಿ.ಪಂ.ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಚ್.ಮೀಶೆ ಮಾತನಾಡಿದರು. ರಾಣೆಬೆನ್ನೂರ ಟಿಎಚ್‌ಒ ರಾಜೇಶ್ವರಿ ಕದರಮಂಡಲಗಿ ಉಪನ್ಯಾಸ ನೀಡಿದರು. ವಿದ್ಯಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ, ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ದಿಲ್‌ಶಾದ್, ಇತರರು ಉಪಸ್ಥಿತರಿದ್ದರು. ಸುನಿತಾ ಸ್ವಾಗತಿಸಿದರು. ರಕ್ಷಾ ಅಣ್ಣಿಗೇರಿ ನಿರೂಪಿಸಿದರು.

ನರೇಗಾದಲ್ಲಿ ಮಹಿಳಾ ಕಾರ್ಮಿಕರು ಹೆಚ್ಚಾಗಲಿ

ಜಿಲ್ಲೆಯಲ್ಲಿ ನರೇಗಾದಡಿ ಕೆಲಸಮಾಡುವ ಮಹಿಳೆಯರ ಸಂಖ್ಯೆ ಶೇ.48ರಷ್ಟಿದೆ. ಬರುವ ದಿನಗಳಲ್ಲಿ ಈ ಸಂಖ್ಯೆ ಅಧಿಕವಾಗಬೇಕು. ಕೆಲಸದ ಅವಶ್ಯಕತೆ ಇರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಕೆಲಸ ನೀಡುವ ಮೂಲಕ ಅವರ ಆರ್ಥಿಕ ಸುಧಾರಣೆಗೆ ಶ್ರಮಿಸಬೇಕು. ಜೊತೆಗೆ ಸಂಜೀವಿನಿ ಸ್ವಸಹಾಯ ಸಂಘಗಳು ಸಾಲ ಪಡೆದ ಹಣದ ಸದುಪಯೋಗಬಾಗಬೇಕು ಹಾಗೂ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಬೇಕು. ತಮಗೆ ಮಾರುಕಟ್ಟೆ ವ್ಯವಸ್ಥೆ ಬೇಕಾದಲ್ಲಿ ನನ್ನು ಸಂಪರ್ಕಿಸಿ ನಾನು ತಮಗೆ ಸಹಾಯಮಾಡುವೆ ಎಂದು ಸಿಇಒ ರುಚಿ ಬಿಂದಾಲ್ ಸಲಹೆ ನೀಡಿದರು.

104 ಸ್ತ್ರೀಯರಿಗೆ ಸನ್ಮಾನ

ಸಮಾರಂಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್, ಸ್ವಚ್ಛತಾ ವಾಹನದ ಚಾಲಕರು, ಸಹಾಯಕರು, ಮಹಿಳಾ ನೀರು ಗಂಟಿಯರು, ಮಹಿಳಾ ಕಾಯಕ ಬಂಧುಗಳು, ಪಶು ಸಖಿ, ಕೃಷಿ ಸಖಿ, ಸಂಜೀವಿನಿ ಸ್ವ ಸಹಾಯ ಸಂಘಳ ಪ್ರತಿನಧಿಗಳು ಸೇರಿದಂತೆ 104 ಮಹಿಳೆಯರನ್ನು ಸನ್ಮಾನಿಸಲಾಯಿತು.