ಜಿಲ್ಲೆ

ರೇಷ್ಮೆ ತೋಟ ವೀಕ್ಷಿಸಿದ ಜಿಪಂ ಸಿಇಒ ಅಕ್ಷಯ ಶ್ರೀಧರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಣೇಬೆನ್ನೂರ ತಾಲೂಕಿನ ವೈ.ಟಿ.ಹೊನ್ನತ್ತಿ ಸೇರಿದಂತೆ ವಿವಿಧ ಗ್ರಾಮಗಳ ರೇಷ್ಮೆ ತೋಟಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಮನರೇಗಾ ಯೋಜನೆಯಡಿ ಹೊಸ ಹಿಪ್ಪುನೇರಳೆ ತೋಟ ಸ್ಥಾಪಿಸಿದ ಫಲಾನುಭವಿಗಳ ರೇಷ್ಮೆ ತೋಟ, ಚಾಕಿ ಸಾಕಾಣಿಕಾ ಕೇಂದ್ರಗಳಿಗೆ ಭೇಟಿ ನೀಡಿದರು. ಚಾಕಿ ಹುಳುಗಳನ್ನು ಮತ್ತು 4ನೇ ಮತ್ತು 5ನೇ ಹಂತದ ರೇಷ್ಮೆ ಹುಳು ಸಾಕಾಣಿಕೆ ಕೈಗೊಂಡ ರೇಷ್ಮೆ ಬೆಳೆಗಾರರ ಬೆಳೆ ವೀಕ್ಷಿಸಿದರು. ವೈ.ಟಿ.ಹೊನ್ನತ್ತಿ ಗ್ರಾಮದಲ್ಲಿ ರೇಷ್ಮೆ ಬೆಳಗಾರರ ಗುಂಪು ಚರ್ಚೆಯಲ್ಲಿ ಪಾಲ್ಗೊಂಡು, ರೇಷ್ಮೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೇಷ್ಮೆ ಉಪ ನಿರ್ದೇಶಕ ಮಲ್ಲಿಕಾರ್ಜುಸ್ವಾಮಿ, ರೇಷ್ಮೆ ಇಲಾಖೆಯಿಂದ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಪಂಚಾಯಿತಿ ಯೋಜನೆಯಡಿ ನೀಡುವ ಸಹಾಯಧನ ಸೌಲಭ್ಯಗಳ ಬಗೆಗೆ ಮಾಹಿತಿ ನೀಡಿದರು. ರೇಷ್ಮೆ ಸಹಾಯಕ ನಿರ್ದೇಶಕ ಬಿ.ಆರ್.ಅಂಗಡಿ, ಪ್ರಭಾರ ರೇಷ್ಮೆ ವಿಸ್ತರಣಾಧಿಕಾರಿ ಎಸ್.ಎಸ್.ಅಂಗಡಿ, ಇತರರು ಇದ್ದರು.