ಜಿಲ್ಲೆ

ಬರಗಾಲ ಹಿನ್ನೆಲೆ ಬೇಸಿಗೆಯಲ್ಲೂ ಬಿಸಿಯೂಟ; ಏ.11ರಿಂದ ಜಿಲ್ಲೆಯ 910 ಶಾಲೆಗಳಲ್ಲಿ 41 ದಿನ ಅಕ್ಷರ ದಾಸೋಹ; ಜಿಪಂ ಸಿಇಒ ಅಕ್ಷಯ ಶ್ರೀಧರ

ಹಾವೇರಿ: ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಏ.11ರಿಂದ ಮೇ 28ರವರೆಗೆ 41 ದಿನಗಳ ಕಾಲ ಮಧ್ಯಾಹ್ನ ಬಿಸಿಯೂಟ ಪೂರೈಸಲಾಗುವುದು. ಶಾಲಾ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 910 ಶಾಲೆಗಳಲ್ಲಿ 1ರಿಂದ 10ನೇ ತರಗತಿಯ 98,561 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಸಿದ್ಧತೆ ಮಾಡಲಾಗುತ್ತಿದೆ. ಮಕ್ಕಳಿಂದ ಒಪ್ಪಿಗೆ ಪಡೆದು ಈ ಅಂಕಿ-ಅಂಶ ಸಿದ್ಧಪಡಿಸಲಾಗಿದೆ. ಸಮರ್ಪಕವಾಗಿ ಬಿಸಿಯೂಟ ವಿತರಣೆಯ ಮೇಲುಸ್ತುವಾರಿಗಾಗಿ 910 ಮುಖ್ಯೋಪಾಧ್ಯಾಯರು ಹಾಗೂ 35 ಹಿರಿಯ ಶಿಕ್ಷಕರನ್ನು ನೇಮಿಸಲಾಗಿದೆ. ಪ್ರತಿ 1.5 ಕೀ.ಮಿ ವ್ಯಾಪ್ತಿಯೊಳಗೆ ಬರುವ ಶಾಲೆಗಳನ್ನು ಸಂಯೋಜಿಸಿ 910 ಕೇಂದ್ರಗಳನ್ನಾಗಿ ರಚಿಸಲಾಗಿದೆ.
ಎಲ್ಲ ಶಾಲೆಗಳಿಗೆ ಸಮರ್ಪಕವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಕುಡಿಯುವ ನೀರು, ಸ್ವಚ್ಛತೆ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಗಮನನೀಡಲು ಸೂಚಿಸಲಾಗಿದೆ. ಶಾಲಾ ಹಂತದಲ್ಲಿ ಮುಖ್ಯೋಪಾಧ್ಯಾಯರಿಗೆ, ತಾಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿಗಳು ಶಿಕ್ಷಣ ಸಂಯೋಜಕರು ಹಾಗೂ ಸಹಾಯಕ ನಿರ್ದೇಶಕರಿಗೆ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
ತಾಲೂಕಾವಾರು ವಿವರ:
ಬ್ಯಾಡಗಿ ತಾಲೂಕಿನಲ್ಲಿ 77 ಕೇಂದ್ರಗಳಲ್ಲಿ 8,292 ಮಕ್ಕಳು, ಹಾನಗಲ್ಲ ತಾಲೂಕಿನಲ್ಲಿ 180 ಕೇಂದ್ರಗಳಲ್ಲಿ 18,532 ಮಕ್ಕಳು, ಹಾವೇರಿ ತಾಲೂಕಿನಲ್ಲಿ 149 ಕೇಂದ್ರಗಳಲ್ಲಿ 15,404 ಮಕ್ಕಳು, ಹಿರೇಕೆರೂರ ತಾಲೂಕಿನಲ್ಲಿ 148 ಕೇಂದ್ರಗಳಲ್ಲಿ 13,262 ಮಕ್ಕಳು, ರಾಣೆಬೆನ್ನೂರ ತಾಲೂಕಿನಲ್ಲಿ 158 ಕೇಂದ್ರಗಳಲ್ಲಿ 14,280 ಮಕ್ಕಳು, ಸವಣೂರ ತಾಲೂಕಿನಲ್ಲಿ 77 ಕೇಂದ್ರಗಳಲ್ಲಿ 15,057 ಮಕ್ಕಳು ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 121 ಕೇಂದ್ರಗಳಲ್ಲಿ 13,734 ಮಕ್ಕಳು ಮಧ್ಯಾಹ್ನ ಬಿಸಿಯೂಟ ಸ್ವೀಕರಿಸಲು ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡುವಂತೆ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದ್ದಾರೆ.