ಜಿಲ್ಲೆ

ಹಾವೇರಿಯಲ್ಲಿ ವಂದೇ ಮಾತರಂಗೆ ಭವ್ಯ ಸ್ವಾಗತ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಧಾರವಾಡ- ಬೆಂಗಳೂರು ನಡುವೆ ಮೊದಲ ಬಾರಿಗೆ ಸಂಚಾರ ಆರಂಭಿಸಿದ ವಂದೇ ಭಾರತ ರೈಲು ಮಂಗಳವಾರ ಹಾವೇರಿ ಮಾರ್ಗವಾಗಿ ಸಂಚರಿಸಿತು. ಮೊದಲ ಬಾರಿಗೆ ಹಾವೇರಿಯ ಮೈಲಾರ ಮಹಾದೇವ ರೈಲು ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ ರೈಲಿಗೆ ಹಾವೇರಿಗರು ಭವ್ಯ ಸ್ವಾಗತ ಕೋರಿದರು.
ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ವರ್ಚುಯೆಲ್ ಮೂಲಕ ವಂದೇ ಭಾರತ ರೈಲಿಗೆ ಚಾಲನೆ ನೀಡಿದರು. ಧಾರವಾಡದಿಂದ ಸಂಚಾರ ಆರಂಭಿಸಿದ ರೈಲು ಮಧ್ಯಾಹ್ನ 12.30ಕ್ಕೆ ಹಾವೇರಿಗೆ ಆಗಮಿಸಿತು. ಹಾವೇರಿಯಲ್ಲಿ ಈ ರೈಲಿಗೆ ನಿಲುಗಡೆ ಇಲ್ಲದಿದ್ದರೂ ಆರಂಭೋತ್ಸವದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಮೊದಲ ದಿನ ನಿಲುಗಡೆ ಕೊಡಲಾಗಿತ್ತು. ಇದಕ್ಕಾಗಿ ನಿಲ್ದಾಣವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು.
ರೈಲು ಆಗಮಿಸುತ್ತಿದ್ದಂತೆ ನೆರೆದಿದ್ದ ನೂರಾರು ಸಾರ್ವಜನಿಕರು, ಶಾಲಾ ಮಕ್ಕಳು, ರೈಲ್ವೆ ಸಿಬ್ಬಂದಿ ಚಪ್ಪಾಳೆ ಮೂಲಕ ಸ್ವಾಗತಿಸಿದರು. ನೂತನ ರೈಲಿನ ಜತೆಗೆ ಫೋಟೋ, ವಿಡಿಯೋ ತೆಗೆದು ಸಂಭ್ರಮಿಸಿದರು. ಹಾವೇರಿಯ ಕೆಲ ಶಾಲಾ ಮಕ್ಕಳು ಹಾವೇರಿಯಿಂದ ದಾವಣಗೆರೆ ವರೆಗೆ ಸಂಚರಿಸಿ ಪುಳಕಿತರಾದರು.
ಸಂಸದ ಉದಾಸಿ ಗೈರು
ವಂದೇ ಭಾರತ ರೈಲು ಸ್ವಾಗತ ಕಾರ್ಯಕ್ರಮಕ್ಕೆ ಸಂಸದ ಶಿವಕುಮಾರ ಉದಾಸಿ ಗೈರಾಗಿದ್ದರು. ಹಾವೇರಿಯಲ್ಲಿ ನಿತ್ಯ ಈ ರೈಲು ನಿಲುಗಡೆಗೆ ಸಂಸದ ಯತ್ನಿಸಿದರಾದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಗೈರಾಗಿದ್ದರು ಎಂದು ಹೇಳಲಾಗಿದೆ.