ಜಿಲ್ಲೆ

ಮಹಿಳಾ ಮತದಾರರ ನೋಂದಣಿ ಮಾಡಿಸಿ; ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಿ; ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್.ವಿಶಾಲ ಸೂಚನೆ

ಹಾವೇರಿ: ಜಿಲ್ಲೆಯಲ್ಲಿ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು. ಮಹಿಳಾ ಮತದಾರರ ಪ್ರಮಾಣ ಕಡಿಮೆ ಇದೆ. ಯಾವ ಪ್ರದೇಶದಲ್ಲಿ ಮಹಿಳಾ ಮತದಾರರ ನೋಂದಣಿ ಕಡಿಮೆ ಇದೆ ಎಂದು ಪರಿಶೀಲಿಸಿ, ನೋಂದಣಿಗೆ ಕ್ರಮವಹಿಸಿ ಎಂದು ಜಿಲ್ಲೆಯ ತಹಶೀಲ್ದಾರರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರ ಪಟ್ಟಿ ವೀಕ್ಷಕ ಡಾ.ವಿಶಾಲ ಆರ್. ಸೂಚಿನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2024ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗೃಹಲಕ್ಷ್ಮೀ ಫಲಾನುಭವಿಗಳ ಪೈಕಿ ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಪತ್ತೆ ಮಾಡಿ, ನೋಂದಣಿಗೆ ಕ್ರಮವಹಿಸಿ. ಜಿಲ್ಲೆಯ ವಿಕಲಚೇತನ ಮತದಾರರ ನೋಂದಣಿ ಪರಿಶೀಲಿಸಿದಾಗ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚಿರುವುದು ಕಂಡುಬಂದಿದೆ. ಈ ಕುರಿತಂತೆ ಪರಿಶೀಲಿಸಿ ಯಾರಾದರೂ ವಿಕಲಚೇತನ ಮಹಿಳೆಯರು ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗಿದ್ದರೆ ನೋಂದಣಿಗೆ ಕ್ರಮವಹಿಸುವಂತೆ ಸೂಚಿಸಿದರು.
ಮೃತರು ಮತದಾರರ ಪಟ್ಟಿಯಲ್ಲಿ ಮುಂದುವರೆದಿದ್ದರೆ ಅವರ ಕುಟುಂಬದ ನಮೂನೆ-7 ಪಡೆದು, ಮತದಾರರ ಪಟ್ಟಿಯಿಂದ ಕೈಬಿಡಬೇಕು. ಹೊಸದಾಗಿ ನೋಂದಾಯಿತ ಮತದಾರರ ಅಂಚೆ ಮೂಲಕ ಮತದಾರರ ಗುರುತಿನ ಕಾರ್ಡ್ ಕಳುಹಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಚನ್ನಪ್ಪ ಹಾಗೂ ಮಹ್ಮದ ಖಿಜರ್ ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.