ಹಾವೇರಿ: ದೇವಗಿರಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ವಿಜ್ಞಾನ ಕೇಂದ್ರದ ಗ್ಯಾಲರಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪರಿಶೀಲನೆ ನಡೆಸಿದರು.
ಗುರುವಾರ ವಿಜ್ಞಾನ ಕೇಂದ್ರ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಅವರು, ಹೊರ ಆವರಣದಲ್ಲಿ ಸ್ಥಾಪಿಸಲಾದ ವಿವಿಧ ವಿಜ್ಞಾನ ಮಾದರಿಗಳ ಪರಿಶೀಲನೆ ನಡೆಸಿದರು. ಒಳ ಆವರಣದ ವಸ್ತು ಸಂಗ್ರಹಾಲಯದ ಗ್ಯಾಲರಿ ಹಾಗೂ ಆಡಿಟೋರಿಯಂ ಪರಿಶೀಲಿಸಿದರು.
ಕಟ್ಟಡದ ಅಗ್ನಿ ಸುರಕ್ಷತಾ ಕ್ರಮಗಳು, ಪ್ರಥಮ ಚಿಕಿತ್ಸಾ ಸೌಲಭ್ಯಗಳು, ಮಕ್ಕಳೊಂದಿಗೆ ಬರುವ ಪಾಲಕರಿಗೆ ವೇಟಿಂಗ್ ಕಾರ್ನರ್ ನಿರ್ಮಾಣ, ವೀಕ್ಷಣೆಗೆ ಸಾಮೂಹಿಕವಾಗಿ ಆಗಮಿಸುವ ವಿದ್ಯಾರ್ಥಿಗಳು ಉಪಹಾರ-ಊಟ ಸೇವನೆಗೆ ಓಪನ್ ಶೆಡ್ ನಿರ್ಮಾಣ, ಲಘು ತಿನಿಸುಗಳ ಮಾರಾಟಕ್ಕೆ ಮಳಿಗೆ ಸ್ಥಾಪನೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಸೆಲ್ಫಿ ಕಾರ್ನರ್ ನಿರ್ಮಾಣ ಸೇರಿದಂತೆ ಹಲವು ಹೆಚ್ಚುವರಿ ಸೌಲಭ್ಯಗಳ ಅಳವಡಿಕೆಗೆ ಸಲಹೆ ನೀಡಿದರು.
ವಿಜ್ಞಾನ ಭವನದ ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿ ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಶೀಘ್ರವೇ ಸಂದರ್ಶನ ನಡೆಸಿ ಅಂತಿಮಗೊಳಿಸಲು ಸೂಚನೆ ನೀಡಿದರು.
ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ತಿಮ್ಮೇಶಕುಮಾರ, ವಿಜ್ಞಾನ ಕೇಂದ್ರದ ಉಸ್ತುವಾರಿ ಅಧಿಕಾರಿ ಎ.ಕೆ.ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.