ಕೇಶವಮೂರ್ತಿ ವಿ.ಬಿ. ಹಾವೇರಿ
ಇಲ್ಲಿನ ವಿದ್ಯಾನಗರ ಪಶ್ಚಿಮ ಬಡಾವಣೆಯ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೇ ಗಬ್ಬು ನಾರುತ್ತಿದೆ. ಕೆಸರು ಗದ್ದೆಯಂತಾಗಿರುವ ಪಾರ್ಕ್‌ನಲ್ಲಿದ್ದ ಗಂಧದ ಮರವನ್ನು ಶುಕ್ರವಾರ ರಾತ್ರಿ ಕಳ್ಳರು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ.
ಸುಮಾರು 45 ವರ್ಷಗಳ ಹಿಂದೆ ಇಲ್ಲಿ ಬಡಾವಣೆ ನಿರ್ಮಿಸಲಾಗಿದ್ದು, ಆಗ 14 ಗುಂಟೆ ಜಾಗವನ್ನು ಪಾರ್ಕ್‌ಗಾಗಿ ಮೀಸಲು ಇಡಲಾಗಿತ್ತು. ಅಂದಿನಿಂದ ಈವರೆಗೆ ಪಾರ್ಕ್ ಅಭಿವೃದ್ಧಿ ಮಾಡದೇ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ದಿವ್ಯ ನಿರ್ಲಕ್ಷೃ ತೋರಿದೆ. ಇದೇ ಕಾರಣಕ್ಕೆ ರಾತ್ರಿ ಕಳ್ಳರು ಉದ್ಯಾನಕ್ಕೆ ನುಗ್ಗಿ ಗಂಧದ ಮರ ಕತ್ತರಿಸಿದ್ದಾರೆ. ಶಬ್ದ ಕೇಳಿದ ಪಕ್ಕದ ಮನೆಯ ಮಾಲೀಕರು ಬಾಗಿಲು ತೆರೆದು ನೋಡುತ್ತಿದ್ದಂತೆ ಕಳ್ಳರು ಗಂಧದ ಮರದ ದಪ್ಪನೆಯ ತುಂಡನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯರ ಒತ್ತಾಯದಿಂದಾಗಿ ಕೆಲ ವರ್ಷಗಳ ಹಿಂದೆ ಕಾಂಪೌಂಡ್ ಮಾಡಲಾಗಿದೆ. ಬಿಟ್ಟರೆ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಲಾಗಿಲ್ಲ. ಮಳೆ ಬಂದರೆ ಉದ್ಯಾನ ಕೆಸರು ಗದ್ದೆಯಂತಾಗುತ್ತದೆ. ಉದ್ಯಾನದ ತುಂಬ ಕಸ, ಕಡ್ಡಿ, ಗಿಡ, ಕಂಠಿ ತುಂಬಿಕೊಂಡಿದೆ. ಇದರಿಂದ ಬೀದಿನಾಯಿ, ಹಾವು, ಚೇಳು, ಇತರ ಕೀಟಗಳ ಕಾಟ ಹೆಚ್ಚಾಗಿದೆ.
ಈ ಸಮಸ್ಯೆ ಕುರಿತು ಸ್ಥಳೀಯ ನಗರಸಭೆ ಸದಸ್ಯರಾದ ಪೂಜಾ ಬಸಯ್ಯ ಹಿರೇಮಠ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಇನ್ನಾದರೂ ಈ ಉದ್ಯಾನದ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು. ಕೂಡಲೇ ಉದ್ಯಾನದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಹವಲು ದಶಕಗಳ ಸಮಸ್ಯೆಗೆ ಮುಕ್ತಿ ಕೊಡಬೇಕೆಂದು ಸ್ಥಳೀಯ ನಿವಾಸಿಗಳಾದ ಅರವಿಂದ ಶೆಟ್ಟರ್, ನಾಗರಾಜ ಚೌಧರಿ, ಬಸವರಾಜ ತೊಂಡೂರ, ಶರಣಪ್ಪ ಕುಷ್ಟಗಿ, ಮಂಜುನಾಥ ತೊಂಡೂರ, ಅಲ್ಲಾಭಕ್ಷ ಗುಡಗೂರ, ಮತ್ತಿತರರು ಆಗ್ರಹಿಸಿದ್ದಾರೆ.
ದನದ ಕೊಟ್ಟಿಗೆಯಲ್ಲಿ ವೃದ್ಧೆ ಶೇಕಮ್ಮ ವಾಸ !
ಉದ್ಯಾನವನದ ದನದ ಕೊಟ್ಟಿಗೆಯಂಥ ಗುಡಿಸಿಲಲ್ಲಿ 70 ವರ್ಷದ ವೃದ್ಧೆ ಶೇಕಮ್ಮ ಯಲ್ಲಪ್ಪ ಅರಳಿಹೊಂಡ ಐದು ದಶಕಗಳಿಂದ ವಾಸವಾಗಿದ್ದಾರೆ. ಕೆಸರು ಗದ್ದೆಯಂತಿರುವ ಉದ್ಯಾನದಲ್ಲಿ ಸಣ್ಣ ಗುಡಿಸಲಲ್ಲಿ ದಯನೀಯವಾಗಿ ಜೀವನ ಸಾಗಿಸುತ್ತಿದ್ದಾರೆ.
ಕಲಘಟಗಿ ಮೂಲದ ಶೇಕಮ್ಮ ಪತಿ ಯಲ್ಲಪ್ಪನ ಜತೆಗೆ ಉದ್ಯೋಗ ಅರಸಿಕೊಂಡು ದು ದಶಕಗಳ ಹಿಂದೆ ಹಾವೇರಿಯಲ್ಲಿ ವಾಸವಾಗಿದ್ದಾರೆ. ಆರಂಭದಲ್ಲಿ ಇದೇ ಉದ್ಯಾನವನದಲ್ಲಿ ಗುಡಿಸಿಲು ಹಾಕಿಕೊಂಡು ಜೀವನ ಆರಂಭಿಸಿದ್ದರು. ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿ ದಂಪತಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಪತಿ ನಿಧನ ಹೊಂದಿದ್ದಾರೆ. ಗೌಂಡಿ ಕೆಲಸ ಮಾಡುವ ಮಗ ಮದುವೆ ಮಾಡಿಕೊಂಡು, ನಗರದ ಸಿಂದಗಿ ಮಠದ ಬಳಿ ಬೇರೆ ಮನೆ ಮಾಡಿಕೊಂಡು ಪತ್ನಿ ಜತೆಗೆ ವಾಸವಾಗಿದ್ದಾರೆ. ಮಗ- ಸೊಸೆ ನನ್ನನ್ನು ಮನೆಗೆ ಕರೆದುಕೊಂಡು ಹೋಗಲ್ಲ ಎಂದು ಕಣ್ಣೀರಿಟ್ಟ ಶೇಕಮ್ಮ ಎಮ್ಮೆಯೊಂದನ್ನು ಸಾಕಿಕೊಂಡು ಹಾಲು ಮಾರಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ಆಶ್ರಯ ಯೋಜನೆಯಡಿ ನಿಮಗೆ ಮನೆ ಕೊಡಿಸುತ್ತೇನೆ ಎಂದು ಕೆಲ ಜನಪ್ರತಿನಿಧಿಗಳು ಶೇಕಮ್ಮನಿಂದ 15 ಸಾವಿರ ರೂ. ಪಡೆದು ಈವರೆಗೆ ಮನೆ ಕಲ್ಪಿಸಿಕೊಟ್ಟಿಲ್ಲ. ಆಶ್ರಯ ಮನೆ ಕಲ್ಪಿಸಿಕೊಟ್ಟರೆ ನೆಮ್ಮದಿಯಾಗಿ ಬದುಕುತ್ತೇನೆ ಎನ್ನುತ್ತಾರೆ ಶೇಕಮ್ಮ.
ಕೋಟ್:
ಹಲವು ವರ್ಷಗಳಿಂದ ಉದ್ಯಾನವನದ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕೆಸರು, ಕಸ, ಕಡ್ಡಿಯಿಂದ ತುಂಬಿಕೊಂಡಿದೆ. ಇದಕ್ಕೆ ಉದ್ಯಾನವನ ಅನ್ನೋದಕ್ಕೆ ಹೇಗೆ ಸಾಧ್ಯ. ಇಲ್ಲಿನ ಮಕ್ಕಳಿಗೆ ಆಟವಾಡಲು ಸ್ಥಳ ಇಲ್ಲದಂತಾಗಿದೆ. ಸಂಬಂಧಪಟ್ಟವರು ವೃದ್ದೆ ಶೇಕಮ್ಮಳಿಗೆ ಮನೆಯ ವ್ಯವಸ್ಥೆ ಮಾಡಿಕೊಡಲಿ. ಉದ್ಯಾನವನ ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಿ.
> ಅರವಿಂದ ಶೆಟ್ಟರ್, ಸ್ಥಳೀಯರು