ಜಿಲ್ಲೆ

ದಾವಣೆಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ಅಧಿವೇಶನ 23ರಿಂದ; ಎರಡು ಲಕ್ಷಕ್ಕೂ ಅಧಿಕ ಜನ ಭಾಗಿ; ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಹೇಳಿಕೆ

ಹಾವೇರಿ: ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಡಿ.23, 24ರಂದು ದಾವಣಗೆರೆಯ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೇಶದ ವಿವಿಧ ಭಾಗಗಳಿಂದ ಹಲವು ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಮಹಾಸಭಾದ ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ, ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ, ಸಚಿವರಾದ ಈಶ್ವರ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ, ವಿನಯ ಕುಲಕರ್ಣಿ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಇದೊಂದು ಅವಿಸ್ಮರಣೀಯ ಸಮಾವೇಶವಾಗಲಿದೆ. ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಪ್ರಮುಖವಾಗಿ ಕೇಂದ್ರ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಸೇರಿಸುವ ಪ್ರಮುಖ ಬೇಡಿಕೆ ಸಲ್ಲಿಸಲಾಗುವುದು. ಜಾತಿ ಗಣತಿಯನ್ನು ಪುನರ್ ಪರಿಶೀಲನೆ ಮಾಡಿ ಹೊಸದಾಗಿ ಜಾತಿ ಜನಗಣತಿ ಮಾಡಲು ಒತ್ತಾಯ ಮಾಡಲಾಗುವುದು. ಡಿ.24ರಂದು ಕೃಷಿ, ಯುವ, ಮಹಿಳಾ ಗೋಷ್ಟಿಗಳು ನಡೆಯಲಿವೆ. ಜಿಲ್ಲೆಯಿಂದ ಸಮುದಾಯದ ಸುಮಾರು 10 ಸಾವಿರ ಜನ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಾವೇರಿ ತಾಲೂಕು ಅಧ್ಯಕ್ಷ ಮೃತ್ಯುಂಜಯ ಬುಕ್ಕಶೆಟ್ಟಿ, ತಾಲೂಕು ಉಪಾಧ್ಯಕ್ಷ ಅಜ್ಜನಗೌಡ ಗೌಡಪ್ಪನವರ, ಜಿಲ್ಲಾ ಖಜಾಂಚಿ ವಿಶ್ವನಾಥ ಅಂಕಲಕೋಟಿ, ಶಂಭು ಚಕ್ಕಡಿ, ಶಿವಬಸಪ್ಪ ಟೊಂಕದ, ವೀರಣ್ಣ ಹರಣಗೇರಿ, ವೀರಣ್ಣ ನೀರಲಗಿ, ಮುರಿಗೆಪ್ಪ ಮುಂಡಾಸದ, ಇತರರಿದ್ದರು.