ಹಾವೇರಿ: ದೇವಿಹೊಸೂರು ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಹಾವೇರಿ ಐಡಿಎಪ್ ಸಹಯೋಗದಲ್ಲಿ ಕನವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ವೀಳ್ಯದೆಲೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳು ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಭುದೇವ ಅಜ್ಜಪ್ಪಳವರ, ವೀಳ್ಯದೆಲೆ ಬೆಳೆಗೆ ಅವಶ್ಯವಿರುವ ಪೋಷಕಾಂಶಗಳ ನಿರ್ವಹಣೆಯ ಕುರಿತು ಹಾಗೂ ಕೃಷಿ ಅಭಿಯಾಂತ್ರಿಕ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕಿರಣ ನಾಗಜ್ಜನವರ ವೀಳ್ಯದೆಲೆ ಬೆಳೆಯ ತಾಂತ್ರಕ ಕೊಯ್ಲು ಹಾಗೂ ಕೊಯ್ಲೋತ್ತರ ತಂತ್ರಜ್ಞಾನಗಳ ಕುರಿತು ತಿಳಿಸಿದರು.
ತೋಟಪಟ್ಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನರಾಜ ಎನ್. ವೀಳ್ಯದೆಲೆ ಬೆಳೆಯ ಆಧುನಿಕ ಬೇಸಾಯ ಪದ್ಧತಿಗಳ ಕುರಿತು ಹಾಗೂ ಸಹಾಯಕ ತೋಟಗಾರಿಕ ಅಧಿಕಾರಿ ಅಶೋಕ ಕುರುಬರ ವಿವಿಧ ಯೋಜನೆಗಳ ಕುರಿತು ತಿಳಿಸಿದರು. ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿನಯಕುಮಾರ ಎಂ.ಎಂ., ವೀಳ್ಯದೆಲೆ ಬೆಳೆಗೆ ಭಾದಿಸುವ ಕೀಟಗಳು ಹಾಗೂ ನಿಯಂತ್ರಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಐಡಿಎಪ್ ಸಂಸ್ಥೆ ಅಧ್ಯಕ್ಷ ಮಂಜಪ್ಪ ಲಿಂಗದಹಳ್ಳಿ, ಸಸ್ಯರೋಗ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ ಬಿ., ವೀಳ್ಯದೆಲೆ ಬೆಳೆಗಾರರು ಭಾಗವಹಿಸಿದ್ದರು.