ಹಾವಾರಿ: ತಾಲೂಕಿನ ವರದಾಹಳ್ಳಿ ಗ್ರಾಮದ ರೈತ ನಿಂಗಪ್ಪ ಜಾಡರ ಹೊಲದಲ್ಲಿ ಇತ್ತೀಚೆಗೆ ಪ್ರಸಕ್ತ 2023-24ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ‘ಸೋಯಾ, ಅವರೆ ಬೆಳೆಯಲ್ಲಿ ಕ್ಷೇತ್ರೋತ್ಸವ’ ಕಾರ್ಯಕ್ರಮ ಜರುಗಿತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಾಂತವೀರಯ್ಯ ಮಾತನಾಡಿ, ಮಣ್ಣು ಪರೀಕ್ಷೆ ಮಾಡಿಸಿ ರೈತರು ಶಿಫಾರಸ್ಸಿಗೆ ತಕ್ಕಂತೆ ಪೋಷಕಾಂಶಗಳನ್ನು ಮತ್ತು ಗೊಬ್ಬರಗಳನ್ನು ಸರಿಯಾದ ಹಂತದಲ್ಲಿ ಬಳಸಿದರೆ ಉತ್ತಮ ಇಳುವರಿ ಪಡೆಯಬಹುದೆಂದು ತಿಳಿಸಿದರು.
ದೇವಿಹೊಸೂರು ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಸಂತೋಷ ಬಡ್ಡಿ ಮಾತನಾಡಿ, ಯಾವುದೇ ಬೆಳೆಗೆ ಸಂಬಂಧಿತ ಮಾಹಿತಿ ಮತ್ತು ತರಬೇತಿಗಾಗಿ ರೈತರು ಹತ್ತಿರದ ದೇವಿಹೊಸೂರು ತರಬೇತಿ ಕೇಂದ್ರಕ್ಕೆ ಬಂದು ಕೃಷಿ ಮಾಹಿತಿ ಪಡೆಯಬಹುದು ಎಂದರು.
ರೈತ ನಿಂಗಪ್ಪ ಜಾಡರ ಮಾತನಾಡಿ, ಬಿತ್ತನೆಯಿಂದ ಕಟಾವಿನವರೆಗೂ ಕೃಷಿ ಅಧಿಕಾರಿಗಳು ಎಲ್ಲ ಹಂತದಲ್ಲಿ ಸರಿಯಾದ ಮಾಹಿತಿ ನೀಡಿದ್ದರಿಂದ ಹೆಚ್ಚಿನ ಫಸಲು ತೆಗೆಯಲು ಅನುಕೂಲವಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ.ಬಿ.ಎಚ್., ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಹಾದಿಮನಿ, ಸದಸ್ಯ ನಾಗಪ್ಪ ವಿಭೂತಿ ಮತ್ತು ಗ್ರಾಮದ ಪ್ರಗತಿಪರ ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.
ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಬಸನಗೌಡ ಪಾಟೀಲ ಸ್ವಾಗತಿಸಿದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕ ಚಂದ್ರಶೇಖರ ಎಸ್.ಕೆ ನಿರೂಪಿಸಿದರು.