ಜಿಲ್ಲೆ

ಸಿಎಂ ಭರವಸೆ ಹಿನ್ನೆಲೆ ವಾಲ್ಮೀಕಿ ಜಯಂತಿ ಬಹಿಷ್ಕಾರ ವಾಪಸ್; 17ರಂದು ಅದ್ಧೂರಿ ಆಚರಣೆ; ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ

ಹಾವೇರಿ: ವಾಲ್ಮೀಕಿ ಜನಾಂಗದ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದ 187 ಕೋಟಿ ರೂ. ಹಣ ಬಿಡುಗಡೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ವಾಲ್ಮೀಜಿ ಮಹರ್ಷಿ ಜಯಂತಿ ಆಚರಣೆ ಬಹಿಷ್ಕಾರ ನಿರ್ಧಾರವನ್ನು ವಾಪಸ್ ಪಡೆಯಲಾಗಿದೆ. ಅ.17ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಮಹಸಭಾ ಹಾಗೂ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 187 ಕೋಟಿ ದುರ್ಬಳಕೆ, ಸಮಾಜದ ಹಿತ ಕಡೆಗಣನೆ, ವಿವಿಧ ಇಲಾಖೆಗಳ ಆರ್ಥಿಕ ಸೌಲಭ್ಯಗಳು ವಾಲ್ಮೀಕಿ ಸಮಾಜದವರಿಗೆ ದೊರೆಯದಿರುವ ಕಾರಣ ಈ ಬಾರಿ ವಾಲ್ಮೀಕಿ ಜಯಂತಿ ಬಹಿಷ್ಕಾರ ಹಾಕಲು ಜಿಲ್ಲಾಡಳಿತದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದ್ದೆವು ಎಂದರು.
ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರ ನೇತೃತ್ವದಲ್ಲಿ ಸಮಾಜದ ಪ್ರಮುಖರ ತಂಡ ಅ.9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರವಾಗಿದೆ ಎನ್ನಲಾದ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ. ತಳವಾರ ಹೆಸರಿನಲ್ಲಿ ನಕಲಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ಪಡೆಯುತ್ತಿರುವದನ್ನು ತಡೆಯಲು ಅಗತ್ಯ ಕ್ರಮವಹಿಸಲು ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಅಭಿವೃದ್ಧಿ ನಿಗಮದಲ್ಲಿ ದುರ್ಬಳಕೆ ಯಾದ 187 ಕೋಟಿ ರೂ. ಜತೆಗೆ, ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ವಾಲ್ಮೀಕಿ ಜಯಂತಿಯಂದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಬಸವರಾಜ ಹಾದಿಮನಿ, ಅಶೋಕ ಹರನಗೇರಿ, ನಾಗರಾಜ ಬಡೆಮ್ಮನವರ, ಶೇಖರಪ್ಪ ಕಳ್ಳಿಮನಿ, ಕೃಷ್ಣ ಜವಳಿ, ಇತರರು ಇದ್ದರು.
ವಾಲ್ಮೀಕಿ ಹಗರಣ ಎನ್ನಬೇಡಿ
187 ಕೋಟಿ ರೂ. ದುರ್ಬಳಕೆ ಪ್ರಕರಣವನ್ನು ವಾಲ್ಮೀಕಿ ಹಗರಣ ಎನ್ನಬೇಡಿ. ಹೀಗೆ ಹೇಳಿದರೆ ನಮಗೆ ನೋವಾಗುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಎಂಬ ಪದವನ್ನು ಬಳಸಿ ಎಂದು ರಮೇಶ ಆನವಟ್ಟಿ ಕೋರಿಕೊಂಡರು.