ಹಾವೇರಿ: ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸುಮಾರು 18ಕ್ಕೂ ಅಧಿಕ ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಉಂಟಾಗಿದ್ದು, ಈ ಒತ್ತಡ ಕಡಿಮೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿ (ವಿಎ)ಗಳ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಇಲಾಖೆ ನಮಗೆ ಮೊಬೈಲ್, ಲ್ಯಾಪ್‌ಟಾಪ್ ಸೇರಿ ಯಾವುದೇ ಉಪಕರಣ ಕೊಟ್ಟಿಲ್ಲ. ಜತೆಗೆ ವಿಎಗಳಿಗೆ ನಿರ್ದಿಷ್ಟ ಕಚೇರಿಯನ್ನೂ ಗುರುತಿಸಿಲ್ಲ. ಪ್ರತಿದಿನ ಟಾರ್ಗೆಟ್, ಸಭೆ, ಎಂಬಿತ್ಯಾದಿ ಒತ್ತಡ ಹೇರಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ 50ಕ್ಕೂ ಹೆಚ್ಚು ವಿಎಗಳು ಮೃತಪಟ್ಟಿದ್ದಾರೆ. ಶಿಗ್ಗಾಂವಿಯ ಮಂಜುನಾಥ ಮುಳಗುಂದ ಎಂಬುವರು ಬ್ರೇನ್ ಹ್ಯಾಮರೇಜ್ ಆಗಿ ಇತ್ತೀಚೆಗಷ್ಟೆ ಮೃತಪಟ್ಟಿದ್ದಾರೆ.
ಎಲ್ಲ ಮೊಬೈಲ್ ಆ್ಯಪ್‌ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ. ಎಲ್ಲ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ರುದ್ರೇಶ ಎ.ಸಿ., ಪ್ರಮುಖರಾದ ಡಿ.ಎನ್.ಪಾಟೀಲ, ಎಂ.ಎನ್.ಸಂಜೀವಣ್ಣನವರ, ನಾಗರಾಜ ರೆಡ್ಡಿ, ಎಸ್.ಬಿ.ದೇಸಾಯಿ, ಎಸ್.ಎಂ.ಯತ್ನಳ್ಳಿ, ಎಂ.ಎಸ್.ಜಮಾದಾರ, ಎಂ.ಆರ್.ಪಾಟೀಲ, ಇತರರಿದ್ದರು.