ಹಾವೇರಿ: ಭ್ರಷ್ಟಾಚಾರ ಮುಕ್ತ ಕರ್ನಾಟಕ ನಮ್ಮ ಧ್ಯೇಯ. ಇದಕ್ಕೆ ಸಾರ್ವಜನಿಕರು, ಅಧಿಕಾರಿಗಳು, ಮಾಧ್ಯಮದವರು ಎಲ್ಲರೂ ಸಹಕರಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಮನವಿ ಮಾಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಪ್ರವಾಸದಲ್ಲಿ ಜಿಲ್ಲೆಯ ಹಲವು ಇಲಾಖೆ ಅಧಿಕಾರಿ, ಸಿಬ್ಬಂದಿ ಮೇಲೆ ಸುಮೊಟೊ ಪ್ರಕರಣ ದಾಖಲಿಸಿ, ನೋಟಿಸ್ ನೀಡಿರುವೆ. ಗುರುವಾರ ಒಂದೇ ದಿನ 316 ಕೇಸ್ ಸಾರ್ವಜನಿಕರಿಂದ ದಾಖಲಾಗಿದ್ದು, ಅದರಲ್ಲಿ 113 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದ್ದೇನೆ. ಉಳಿದ ಕೇಸ್‌ಗಳ ದಾಖಲೆ ಸಂಗ್ರಹಿಸಿ ಶೀಘ್ರವೇ ಬಗೆಹರಿಸುವೆ ಭರವಸೆ ನೀಡಿದರು.
20 ಹೋಟೆಲ್‌ಗಳ ಮೇಲೆ ನಮ್ಮ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಅದರಲ್ಲಿ ನಾಲ್ಕು ಹೋಟೆಲ್‌ಗಳಲ್ಲಿ ಅನೈರ್ಮಲ್ಯ, ಇತರ ಸಮಸ್ಯೆ ಕಂಡುಬಂದಿದೆ. ಆಹಾರ ಇಲಾಖೆ ಅಧಿಕಾರಿಗಳು ಸುಮ್ಮನೆ ಕೂರಬಾರದು. ಎಲ್ಲೆಡೆ ಸಂಚರಿಸಿ ಟ್ರೇಡ್ ಲೈಸನ್ಸ್ ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವೆ.
ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಡಿಎಚ್‌ಒ ಈವರೆಗೆ 49 ಅಕ್ರಮ ವೈದ್ಯರ ವಿರುದ್ಧ ಕ್ರಮ ಜರುಗಿಸಿದ್ದಾರೆ. ಎಲ್ಲರ ವಿರುದ್ಧ ಕ್ರಮ ಜರುಗಿಸಲಿದ್ದಾರೆ. ಹಾಸ್ಟೆಲ್ ಮಕ್ಕಳಿಗೆ ತೊಂದರೆಯಾದರೆ ಸಹಿಸಲ್ಲ. ನನ್ನ ಗಮನಕ್ಕೆ ತನ್ನಿ ಎಂದರು.
ನ್ಯಾಯಾಧೀಶರಾದ ಜಿ.ಎನ್.ಲಕ್ಷ್ಮೀನಾರಾಯಣ, ಬಿ.ಆರ್ ಮುತಾಲಿಕದೇಸಾಯಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಅಂಶುಕುಮಾರ, ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪುರೆ, ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ಇತರರಿದ್ದರು.
ಪೆಟ್ರೋಲ್, ಚಿನ್ನದಲ್ಲೂ ಮೋಸ
ಪೆಟ್ರೋಲ್, ಚಿನ್ನ, ಮಾರುಕಟ್ಟೆ ಎಲ್ಲೆಡೆ ತೂಕದಲ್ಲಿ ಮೋಸ ನಡೆಯುತ್ತಿದೆ. ಹಲವೆಡೆ ತೂಕದ ಯಂತ್ರಗಳು ಸರಿಯಾಗಿಲ್ಲ. ಇಂತಹ ಮೋಸ, ವಂಚನೆಗಳ ಬಗ್ಗೆ ಸಾರ್ವಜನಿಕರು ಮಾಧ್ಯಮಗಳ ಮುಖಾಂತರ ಅಥವಾ ನೇರವಾಗಿ ನಮ್ಮ ಗಮನಕ್ಕೆ ತರಬೇಕು ಎಂದು ನ್ಯಾಯಮೂರ್ತಿಗಳು ಮನವಿ ಮಾಡಿದರು.
ಇಸ್ಪೀಟ್, ಮಟ್ಕಾ ಜೂಜಾಟ ತಡೆಗೆ ಸೂಚನೆ
ಹಾವೇರಿ ತಾಲೂಕು, ದೇವಗಿರಿ ಸೇರಿದಂತೆ ಜಿಲ್ಲೆಯಾದ್ಯಂತ ಇಸ್ಪೀಟ್, ಮಟ್ಕಾ ಜೂಜಾಟದ ಹಾವಳಿ ಹೆಚ್ಚಾಗಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಲೋಕಾಯುಕ್ತರು, ನಿರ್ದಾಕ್ಷಿೃಣ್ಯವಾಗಿ ದಾಳಿ ನಡೆಸಿ. ಸಂಪೂರ್ಣವಾಗಿ ಬಂದ್ ಮಾಡಿಸಿ ಈ ಬಗ್ಗೆ ವರದಿ ಕೊಡುವಂತೆ ಎಸ್‌ಪಿ ಅವರಿಗೆ ಸೂಚಿಸಿದ್ದೇನೆ. ಒಂದು ತಿಂಗಳು ನೋಡುವೆ. ಬಂದ್ ಆಗಿದ್ದರೆ ನಾನೇ ಕ್ರಮ ಜರುಗಿಸುವೆ ಎಂದರು.
ಕಳಪೆ ಜೋಳ ಕುರಿತು ಕೇಸ್
ಕಳಪೆ ಜೋಳ ಸುಮಾರು 20 ಸಾವಿರ ಟನ್ ಸಾಗಣೆ ಮಾಡಿದ್ದಾರೆ. ನಾಯಿ, ದನಗಳೂ ತಿನ್ನಲಾಗದ ಜೋಳವನ್ನು ಹಾವೇರಿ, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಕಳಪೆ ಜೋಳ ಸರಬರಾಜು ಕುರಿತು ಕೇಸ್ ಮಾಡಿ, ಕ್ರಮ ಜರುಗಿಸಲಾಗುವುದು ಎಂದರು. ಈ ಕುರಿತು 'ವಿಜಯವಾಣಿ' ಸರಣಿ ವರದಿ ಪ್ರಕಟಿಸಿತ್ತು.
ಕೋಟ್:
ಕಾಮನ್‌ಮ್ಯಾನ್ ಆಗಿ, ಉಪ ಲೋಕಾಯುಕ್ತನಾಗಿ ಜಿಲ್ಲೆಯಲ್ಲಿ ಮೂರು ದಿನ ಸಂಚರಿಸಿದಾಗ ಇಲ್ಲಿನ ಅವ್ಯವಸ್ಥೆ ನೋಡಿ ಬಹಳ ನೋವು ಉಂಟಾಗಿದೆ. ಎಲ್ಲರಲ್ಲೂ ಮಾನವೀಯತೆ ಮೂಡಬೇಕು. ಹಾವೇರಿ ಜನ ನೀವು ಕಾವೇರಿ ಇದ್ದಂತೆ. ನಿಜಕ್ಕೂ ನೀವು ಒಳ್ಳೆಯವರು. ಬದಲಾಗಿ, ಕಾನೂನು ಅರಿವು ಪಡೆದುಕೊಳ್ಳಿ. ನಿಮ್ಮ ಸಮಸ್ಯೆಗಳ ಕುರಿತು ನಮ್ಮ ಗಮನಕ್ಕೆ ತನ್ನಿ. ಅಧಿಕಾರಿಗಳು ಜನರ ಬಳಿ ಕೈಚಾಚಬೇಡಿ. ಬದುಕು ಸಾರ್ಥಕವಾಗುವಂತೆ ಬದುಕಿ.
- ಬಿ.ವೀರಪ್ಪ, ಉಪ ಲೋಕಾಯುಕ್ತರು