ಹಾವೇರಿ: ಎಪಿಎಂಸಿಯಲ್ಲಿ ಏನೇನೂ ಇಲ್ಲ. ಕಮಿಷನ್ ದಂಧೆ ನಡೆದಿದೆ. ಎಪಿಎಂಸಿ ಕಾರ್ಯದರ್ಶಿಗಳು ಶೌಚಗೃಹ ಇದೆ ಎಂದು, ಇಲ್ಲಿದೆ ಅಲ್ಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಸುಮಾರು 3 ಕೋಟಿ ರೂ. ಸೆಸ್ ಬರುತ್ತದೆ. ಆದರೂ ಯಾವ ಸೌಲಭ್ಯ ನೀಡಿಲ್ಲ. ದೇಶದ ಬೆನ್ನೆಲುಬು ಅಂತಾ ಹೇಳುವ ರೈತರ ಬೆನ್ನು ಮೂಳೆ ಮುರಿಯುತ್ತಿದ್ದಾರೆ.
ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯ ತೂಕದ ಯಂತ್ರದಲ್ಲಿ ಒಂದು ಕಡೆ ನನ್ನ ತೂಕ 79 ಕೆಜಿ ಇದ್ದರೆ, ಮತ್ತೊಂದು ಕಡೆ 72 ಕೆಜಿ ತೊರಿಸುತ್ತದೆ. ಹಾಗಾಗಿ, ಯಂತ್ರಗಳನ್ನು ಜಪ್ತಿ ಮಾಡಿಸಿದ್ದೇನೆ. ನಾವು ತಿಳಿದುಕೊಂಡಿದ್ದೇ ಬೇರೆ. ಇಲ್ಲಿ ಇರುವುದೇ ಬೇರೆ. ನಾವು ಬರುವುದಾಗಿ 15 ದಿನ ಮುಂಚಿತವಾಗಿ ಹೇಳಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ರೈತರು 500, 1000 ಕೆಜಿ ಬೆಳೆ ಬೆಳೆದಾಗ 5, 6 ಕ್ವಿಂಟಾಲ್ ಮೋಸ ಆದರೆ ಸುಮಾರು 5, 6 ಲಕ್ಷ ರೂ. ಮೋಸ ಆಗುತ್ತದೆ. ಇದು ಹಗಲು ದರೋಡೆ ಅಲ್ಲವೇ. ಹಾಗಾಗಿ, ಹಾವೇರಿ, ಬ್ಯಾಡಗಿ ಎಪಿಎಂಸಿ, ಹಾವೇರಿ ಬಸ್ ನಿಲ್ದಾಣದ ಸಮಸ್ಯೆಗಳ ಕುರಿತು 3 ಸುಮೊಟೊ ಪ್ರಕರಣ ದಾಖಲಿಸುತ್ತೇವೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.