ಹಾವೇರಿ: ಪವನ ಶಕ್ತಿಯು ಭವಿಷ್ಯದಲ್ಲಿ ವಿದ್ಯುಚ್ಛಕ್ತಿಯ ಉತ್ಪಾದನೆಗೆ ಅನಿವಾರ್ಯ ಪರ್ಯಾಯ ಮೂಲವಾಗಿ ಪರಿಣಮಿಸಲಿದ್ದು, ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯ ಕುರಿತು ಜನಸಾಮಾನ್ಯರಲ್ಲಿ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದು ಪವನ ಶಕ್ತಿ ತಜ್ಞ, ಸಂಶೋಧಕ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಹೇಳಿದರು. ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಪವನ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಪ್ರದಾಯಿಕ ಇಂಧನ ಮೂಲಗಳ ಅತಿಯಾದ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಪರಿಸರಕ್ಕೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪವನ ಶಕ್ತಿಯ ಮೂಲಕ ವಿದ್ಯುಚ್ಛಕ್ತಿಯ ಉತ್ಪಾದನೆಗೆ ಕೊಡುಗೆ ನೀಡಿರುವ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಈ ಕ್ಷೇತ್ರದ ಉದ್ದಿಮೆದಾರರ ಸೇವೆಯನ್ನು ಇಂದು ಜಾಗತಿಕ ಮಟ್ಟದಲ್ಲಿಯೂ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಈ ಮೂಲಕ ಪರ್ಯಾಯ ಇಂಧನ ಮೂಲಗಳನ್ನು ಹೆಚ್ಚು ಪ್ರಚುರಪಡಿಸುವತ್ತ ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕಿದೆ ಎಂದರು. ದಿನದಿಂದ ದಿನಕ್ಕೆ ವಿದ್ಯುತ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಉತ್ಪಾದನೆ ಕಡಿಮೆಯಾಗುತ್ತಿದೆ. ಭವಿಷ್ಯದಲ್ಲಿ ಇಪ್ಪತ್ತು ವರ್ಷಗಳಲ್ಲಿ ನಾವು ಬಳಸುವ ವಿದ್ಯುತ್ ಅನ್ನು ನಾವೇ ಉತ್ಪಾದಿಸಬೇಕಾದ ಅನಿವಾರ್ಯತೆ ಬರುವ ಸಾಧ್ಯತೆ ಇದೆ. ಅದಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಿದರೆ ಉತ್ತಮ ಎಂದರು.
ಬೃಹತ್ ಪ್ರಮಾಣದ ಟರ್ಬೈನ್‌ಗಳನ್ನು ಸ್ಥಾಪಿಸಿ, ಗಾಳಿಯ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವಂತೆ ಚಿಕ್ಕ ಪ್ರಮಾಣದಲ್ಲಿ ಗಾಳಿಯಂತ್ರಗಳನ್ನು ಸ್ಥಾಪಿಸಿ ಗೃಹ ಬಳಕೆಗಾಗಿ ಅಗತ್ಯ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ತಾವು ಸಂಶೋಧನೆ ಕೈಗೊಂಡಿದ್ದು, ಇದು ತಮ್ಮ ಮಹಾತ್ವಾಕಾಂಕ್ಷೆಯ ಸಂಶೋಧನಾ ಕಾರ್ಯಯೋಜನೆಯಾಗಿದೆ ಎಂದರು.
ಕುಲಸಚಿವ ಡಾ.ಎಸ್.ಟಿ. ಬಾಗಲಕೋಟಿ, ಡಾ.ಪ್ರಶಾಂತ ಎಚ್.ವೈ., ಡಾ.ಅನಿತಾ ಹಾಲಮತ, ಡಾ.ಚಿದಾನಂದ ಕಮ್ಮಾರ, ಡಾ.ಸಂತೋಷ ಆಲದಕಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಭವಿಷ್ಯದಲ್ಲಿ ಕ್ಯಾಂಪಸ್‌ನಲ್ಲಿ ಘಟಕ
ಮುಂಬೈ, ಬೆಂಗಳೂರಿನಂಥ ಮಹಾನಗರಗಳಿಗೆ ಹೋಲಿಸಿದರೆ ಹಾವೇರಿಯಲ್ಲಿ ಸಾಕಷ್ಟು ನೈಸರ್ಗಿಕವಾದ ಗಾಳಿ ಇದೆ. ಇದನ್ನು ಬಳಸಿಕೊಂಡು ವಿದ್ಯುತ್ ತಯಾರಿಸಬಹುದು. ಹಾವೇರಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಭವಿಷ್ಯದಲ್ಲಿ ಸೋಲಾರ್, ಪವನ ವಿದ್ಯುಚ್ಛಕ್ತಿ ಉತ್ಪಾದಿಸುವ ಚಿಂತನೆ ಇದೆ ಎಂದು ಡಾ.ಜಂಗಮಶೆಟ್ಟಿ ಹೇಳಿದರು.