ಜಿಲ್ಲೆ

ಭಕ್ತಿ ಆಂದೋಲನದಲ್ಲಿ ಕನಕದಾಸರ ಮುಂದಾಳತ್ವ; ಹಾವೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಡಾ.ಜಗನ್ನಾಥ ಗೇನಣ್ಣವರ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ದೇವರ ಪೂಜೆಯಲ್ಲಿ ಹಾಗೂ ದೇವಸ್ಥಾನಗಳ ನಿಯಮಗಳಲ್ಲಿ ಜಾತಿಗಳನ್ನು ತರುವುದು ಕಾಗಿನೆಲೆಯ ಕನಕದಾಸರಿಗೆ ಇಷ್ಟವಿರಲಿಲ್ಲ. ಧಾರ್ಮಿಕ ಆಚರಣೆಗಳಲ್ಲಿ ಜಾತಿ ಪದ್ಧತಿಯನ್ನು ಅವರು ತಿರಸ್ಕರಿಸಿದ್ದರು. ಹಾಗಾಗಿ, ಭಕ್ತಿ ಆಂದೋಲನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಂಶೋಧಕ ಡಾ.ಜಗನ್ನಾಥ ಗೇನಣ್ಣವರ ಹೇಳಿದರು.

ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿವಿಯ 2024-25ನೇ ಸಾಲಿನ ಸ್ನಾತಕೋತರ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭ, ಪ್ರಥಮ ವರ್ಷದ ಸ್ನಾತಕೋತರ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮ ಹಾಗೂ ಹಾವೇರಿ ವಿಶ್ವವಿದ್ಯಾಲಯದ ಜ್ಞಾನ ಸರಣಿ ವಿಶೇಷ ಉಪನ್ಯಾಸ ಮಾಲಿಕೆ ‘ಕನಕ ಸಂಸ್ಮರಣೆ ಸರಣಿ-1’ ಇದರ ಪ್ರಥಮ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹರಿಭಕ್ತರಾದ ಕನಕದಾಸರು 1509ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಯ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಸಂತನಾಗುವ ಮೊದಲು ಯೋಧನಾಗಿದ್ದ ಇವರು, ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡರು. ದೇವರ ಲೀಲೆಯಿಂದ ಬದುಕುಳಿದ ನಂತರ ಅವರು ಯೋಧನಾಗಿದ್ದ ಕೆಲಸವನ್ನು ತ್ಯಜಿಸಿ, ಹರಿದಾಸರಾದರು ಮತ್ತು ತಮ್ಮನ್ನು ದೇವರ ಸೇವೆಯಲ್ಲಿ ತೊಡಗಿಸಿಕೊಂಡರು ಎಂದು ವಿವರಿಸಿದರು.

ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿವೆ. ಅವರು ತಮ್ಮ ಎಲ್ಲ ಹಾಡುಗಳಿಗೆ ಕಾಗಿನೆಲೆ ಆದಿಕೇಶವ ಎಂಬ ಕಾವ್ಯನಾಮವನ್ನು ಬಳಸಿದ್ದಾರೆ. ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯ ಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳು ಎಂದರು.

ಕುಲಸಚಿವೆ (ಮೌಲ್ಯಮಾಪನ) ಪ್ರೊ.ವಿಜಯಲಕ್ಷ್ಮೀ ತಿರ್ಲಾಪುರ, ಡಾ.ಕವಿತಾ ಟಿ ನಾಯಕ, ಡಾ.ರವೀಂದ್ರಕುಮಾರ ಬಣಕಾರ, ಇತರರಿದ್ದರು.

ವಿವಿ ವಿದ್ಯಾರ್ಥಿ ಒಕ್ಕೂಟ ರಚನೆ

ಸಮಾರಂಭದಲ್ಲಿ ಹಾವೇರಿ ವಿಶ್ವವಿದ್ಯಾಲಯದ 2024-25ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಮಾಡಲಾಯಿತು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಡಾ.ಕವಿತಾ ಟಿ ನಾಯಕ, ವಿದ್ಯಾರ್ಥಿ ಕೂಟದ ಉಪಾಧ್ಯಕ್ಷರಾಗಿ ಡಾ.ರವೀಂದ್ರಕುಮಾರ ಬಣಕಾರ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥರಾಗಿ ನೂರುಲ್ಲಾ ಖಾದ್ರಿ ಮುತ್ವಳ್ಳಿ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಯಾಗಿ ರಾಜು ಗೋಣೆಪ್ಪನವರ, ವಿದ್ಯಾರ್ಥಿನಿ ಪ್ರತಿನಿಧಿಯಾಗಿ ನೇತ್ರಾ ಹರಿಜನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭುವನೇಶ್ವರಿ, ಸಹ ಕಾರ್ಯದರ್ಶಿಯಾಗಿ ಕವಿತಾ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಸನ್ನ ಮಹೇಂದ್ರಕರ, ಕ್ರೀಡಾ ಸಹ ಕಾರ್ಯದರ್ಶಿಯಾಗಿ ಸಹನಾ ಆಯ್ಕೆಯಾಗಿದ್ದಾರೆ.

ತಿಂಗಳಿಗೊಮ್ಮೆ ದಾಸ ಸಾಹಿತ್ಯದ ಉಪನ್ಯಾಸ

ವಿದ್ಯಾರ್ಥಿಗಳಲ್ಲಿ ದಾಸ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳಿಗೊಮ್ಮೆ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹಾವೇರಿ ವಿವಿ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿದರು.