ಜಿಲ್ಲೆ

ಹಾವೇರಿ ವಿವಿ ಉಳಿಸುವಂತೆ ಸಿಎಂಗೆ ಒತ್ತಾಯ; ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮನವಿ

ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ರದ್ದುಪಡಿಸಿ, ವಿವಿಗೆ ಅಗತ್ಯ ಅನುದಾನ ಒದಗಿಸುವಂತೆ ಒತ್ತಾಯಿಸಿ ಭಾನುವಾರ ಅಕ್ಕಿಆಲೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಮನವಿ ಸಲ್ಲಿಸಿತು.

ಹಾವೇರಿ ವಿಶ್ವವಿದ್ಯಾಲಯ ಮುಚ್ಚುವ ಪ್ರಕ್ರಿಯೆ ಕೈಬಿಡುವಂತೆ ಹಲವು ಹೋರಾಟಗಳಾಗಿವೆ. ಬಜೆಟ್ ಅಧಿವೇಶನದಲ್ಲಿ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ಆದೇಶ ಮಾಡುತ್ತದೆ ಎಂದು ಆಶಾಭಾವನೆ ಹೊಂದಿದ್ದ ನಮಗೆ ಬಜೆಟ್ ಅಧಿವೇಶನದಲ್ಲಿ ತಾವು ಮುಚ್ಚುವ ಪ್ರಸ್ತಾವ ನಮ್ಮ ಮುಂದೆ ಬಂದಿಲ್ಲ, ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನವು ಸಚಿವ ಸಂಪುಟ ಸಭೆಗೆ ಬಂದಮೇಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೀರಿ. ಆದರೆ, ಸರ್ಕಾರದ ಮುಖ್ಯ ಭಾಗವಾಗಿರುವ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಹೇಳಿಕೆಗಳು ಮತ್ತಷ್ಟು ಆತಂಕವನ್ನುಂಟು ಮಾಡಿವೆ. ಕೂಡಲೇ ಮುಚ್ಚುವ ಅಥವಾ ವಿಲೀನಗೊಳಿಸುವ ನಿರ್ಧಾರ ಕೈಬಿಟ್ಟಿರುವುದಾಗಿ ಪ್ರಕಟಿಸುವಂತೆ ಒತ್ತಾಯಿಸಿದರು.

ಹೋರಾಟ ಸಮಿತಿ ಪ್ರಮುಖರಾದ ಸತೀಶ ಕುಲಕರ್ಣಿ, ಬಸವರಾಜ ಪೂಜಾರ, ಹೊನ್ನಪ್ಪ ಮರೆಮ್ಮನವರ, ಪರಿಮಳ ಜೈನ, ಆಂಜನೇಯ, ಇತರರಿದ್ದರು.