ಜಿಲ್ಲೆ

ಹಾವೇರಿ ವಿವಿ ಮುಚ್ಚದಿರಲಿ

ಹಾವೇರಿ: ರಾಜ್ಯ ಬಜೆಟ್ ಅಧಿವೇಶನ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಹಾವೇರಿ ವಿಶ್ವವಿದ್ಯಾಲಯ ಮುಚ್ಚುವುದಿಲ್ಲ ಎಂಬ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಬೇಕು. ಇಲ್ಲದಿದ್ದರೆ ಹಾವೇರಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಹಾವೇರಿ ವಿವಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾವೇರಿ ಸೇರಿದಂತೆ ರಾಜ್ಯದ ಒಂಬತ್ತು ವಿವಿಗಳನ್ನು ಅನುದಾನದ ನೆಪವೊಡ್ಡಿ ಮುಚ್ಚಲು ತೀರ್ಮಾನಿಸಿರುವುದನ್ನು ಖಂಡಿಸಿ ಹಾಗೂ ಹಾವೇರಿ ವಿವಿ ಉಳಿವಿಗೆ ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳು, ಉಪನ್ಯಾಸಕರು, ಸಾಹಿತಿ, ಕಲಾವಿದರ ಬಳಗ, ಮಹಿಳಾ, ರೈತ-ಕಾರ್ಮಿಕರ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ, ಪರಿಷತ್ ಶಾಸಕ ಎಸ್.ವಿ. ಸಂಕನೂರ ಅವರಿಗೂ ಮನವಿ ಸಲ್ಲಿಸಿದ್ದಾರೆ.

ಆದಾಗ್ಯೂ ಹಾವೇರಿ ವಿವಿ ಉಳಿಸಿ ಹೋರಾಟ ಸಮಿತಿ ರಚಿಸಿಕೊಂಡು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ವಿವಿ ಮುಚ್ಚದಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಪ್ರಯತ್ನಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಎಂದರು.

ಪ್ರಮುಖರಾದ ಪರಿಮಳಾ ಜೈನ್, ಸತೀಶ ಎಂ.ಬಿ., ಉಡಚಪ್ಪ ಮಾಳಗಿ, ಶೆಟ್ಟಿ ವಿಭೂತಿ, ಎ.ಎಂ. ಪಟವೇಗಾರ, ಎಂ. ಆಂಜನೇಯ, ಬಸವರಾಜ ಎಸ್., ಹೊನ್ನಪ್ಪ ಮರೆಮ್ಮನವರ, ಶಿವಯೋಗಿ ಹೊಸಗೌಡ್ರ, ಸುನೀತಾ ಲಮಾಣಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಹಾವೇರಿ ಬಂದ್ ಮಾಡಿ ಹೋರಾಟದ ಎಚ್ಚರಿಕೆ

ಹಾವೇರಿ ವಿಶ್ವ ವಿದ್ಯಾಲಯವು ಜಿಲ್ಲೆಯ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಬಹಳ ಅನುಕೂಲವಿದೆ. ಇಷ್ಟುದಿನ ದೂರದ ಬೇರೆ ಬೇರೆ ವಿವಿಗಳಿಗೆ ಹೋಗಬೇಕಾಗಿತ್ತು. ಇಲ್ಲಿಯೇ ವಿವಿ ಆಗಿರುವುದರಿಂದ ಎರಡು ವರ್ಷಗಳಿಂದ ವಿದ್ಯಾರ್ಥಿನಿಯರಿಗೂ ಅನುಕೂಲವಾಗಿದೆ. ಸರ್ಕಾರ ಅನುದಾನ ನೆಪವೊಡ್ಡಿ ಬಂದ್ ಮಾಡಿಸಲು ಹೊರಟಿರುವ ಕ್ರಮ ಸರಿಯಲ್ಲ. ವಿವಿ ಬಂದ್ ಮಾಡಿದರೆ ಹಾವೇರಿ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹಾವೇರಿ ವಿವಿ ಉಳಿಸಿ ಹೋರಾಟ ಸಮಿತಿಗೆ ಬೆಂಬಲ ಸೂಚಿಸಿರುವ ರೈತ ಸಂಘದ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.