ಹಾವೇರಿ: ವಚನ ಸಾಹಿತ್ಯ ಮತ್ತು ಸಾಮಾನ್ಯ ಸಾಹಿತ್ಯದ ನಡುವೆ ತುಂಬಾ ಅಂತರವಿದೆ. ಶರಣರು ಅನುಭವದ ಮೂಲಕ ಹೇಳಿರುವ ಸಾಹಿತ್ಯ ವಚನ ಸಾಹಿತ್ಯ. ಬಸವಾದಿ ಶರಣರ ವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು ಅಡಗಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಆಲೂರ ಹೇಳಿದರು.
ನಗರದ ಜಿ.ಎಚ್. ಕಾಲೇಜ್‌ನಲ್ಲಿ ಶನಿವಾರ ಹಾವೇರಿ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಷಯದ ಕುರಿತ ಒಂದು ದಿನ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಜೀವನದ ಮುಖ್ಯ ಕಾಯಕಗಳಾದ ಕೃಷಿ, ತೋಟಗಾರಿಕೆ, ವಿಜ್ಞಾನ, ಕಳೆ ವಿಜ್ಞಾನ, ಬೇಸಾಯ ವಿಜ್ಞಾನ, ಬೀಜ ವಿಜ್ಞಾನ, ಸಸ್ಯ ವಿಜ್ಞಾನ, ಭೂಗರ್ಭ ಜನ ವಿಜ್ಞಾನ ಹಾಗೂ ಇತರ ವಿಜ್ಞಾನಗಳ ಬಗ್ಗೆಯೂ ಶರಣರು ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.
ಸಮಾಜ ಸುಧಾರಕ, ಕಾಯಕಯೋಗಿ ಬಸವಣ್ಣ ಕೇವಲ ಕರ್ನಾಟಕದ ಸಾಮಸ್ಕೃತಿಕ ನಾಯಕನಲ್ಲ. ಅವರು ವಿಶ್ವದ ಸಾಂಸ್ಕೃತಿಕ ನಾಯಕ. ಬಸವಣ್ಣನವರ ತತ್ವಗಳನ್ನು ಪಾಲಿಸುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ಕರೆ ನೀಡಿದರು.
ಯಾರು ಬೇಕಾದರೂ ದೇವರಾಗಬಹುದು. ಆದರೆ, ಬಸವಣ್ಣನಾಗುವುದು ಕಷ್ಟ. ಸದಾಚಾರ, ಸದ್ವಿಚಾರಗಳ ಬಗ್ಗೆ ಶರಣರು ಹೇಳಿದ್ದಾರೆ. ಆದರೆ, ಇಂದು ವಿದ್ಯಾವಂತರು ಹಾಗೂ ಸುಸಂಸ್ಕೃತರೇ ಅಂಧಶ್ರದ್ಧೆ ಪಾಲಿಸುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಮಾತನಾಡಿ, ನೂತನ ಹಾವೇರಿ ವಿಶ್ವವಿದ್ಯಾಲಯದಿಂದ ಇದೇ ಮೊದಲ ಬಾರಿಗೆ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಯುವ ಸಂಶೋಧಕರು, ಬೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಮೂಡಿಸುವಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೆಮಿನಾರ್‌ಗಳನ್ನು ಆಯೋಜಿಸಲಾಗುವುದು ಎಂದರು.
ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀನಿವಾಸ ಬಳ್ಳಿ ಅವರು, ವಿಶ್ವಶಾಂತಿಗೆ ಬಸವಣ್ಣನವರ ಸಂದೇಶಗಳ ಪ್ರಸ್ತುತತೆ ಕುರಿತು ವಿಚಾರ ಮಂಡಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆ ಮ್ಯಾಕ್ ನಿರ್ದೇಶಕ ವಿಜಯಕುಮಾರ ಕಮ್ಮಾರ ಅವರು ವಚನ ಸಾಹಿತ್ಯದಲ್ಲಿ ಲೋಹ ವಿಜ್ಞಾನ ಕುರಿತು ವಿಚಾರ ಮಂಡಿಸಿದರು.
ಹಾವೇರಿ ವಿವಿ ಕುಲಸಚಿವ ಪ್ರೊ.ಎಸ್.ಟಿ.ಬಾಗಲಕೋಟಿ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವೆ ಪ್ರೊ.ವಿಜಯಲಕ್ಷ್ಮೀ ತಿರ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಎಚ್ ಕಾಲೇಜ್ ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ, ಇತರರಿದ್ದರು.
ಡಾ.ಚಿದಾನಂದ ಕಮ್ಮಾರ, ಡಾ.ಸಂಗಮ್ಮ ಪರಡ್ಡಿ, ಗೀತಾ ಬೆಳಗಾವಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಗೀತಾಂಜಲಿ ಕುರಡಗಿ ನಿರೂಪಿಸಿದರು. ಡಾ.ಕವಿತಾ ನಾಯ್ಕ ವಂದಿಸಿದರು.
ಸಕಲ ಜೀವಸಂಕುಲಕ್ಕೂ ಲೇಸು..
ಬಸವಾದಿ ಶರಣರ ಧರ್ಮವು ವೈಜ್ಞಾನಿಕ ಧರ್ಮವಾಗಿದ್ದು, ಇದರಲ್ಲಿ ಜೀವ ಕಾರುಣ್ಯವೇ ಪ್ರಧಾನವಾಗಿದೆ. ಶರಣರ ಧರ್ಮ ಕೇವಲ ಮನುಷ್ಯರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಸಕಲ ಜೀವಸಂಕುಲಕ್ಕೂ ಲೇಸು ಬಯಸುವ ಜೀವಕೇಂದ್ರಿತ ಧರ್ಮವಾಗಿದೆ. ಕಾಯಕ, ಪ್ರಸಾದ ಮತ್ತು ದಾಸೋಹ ತತ್ವಗಳು ಲಿಂಗಾಯತ ಧರ್ಮದ ಆಧಾರ ಸ್ತಂಭಗಳಾಗಿವೆ. ಕಾಯಕವು ಜ್ಞಾನದ ಪರವಾಗಿರಬೇಕು, ಅಜ್ಞಾನದ ಪರವಾಗಿ ಅಲ್ಲ ಎಂದು ಹಿರಿಯ ಪತ್ರಕರ್ತ, ಸಾಹಿತಿ ರಂಜಾನ್ ದರ್ಗಾ ಹೇಳಿದರು.