ಹಾವೇರಿ: ಪಾಲಿಫೈಬರ್ ಫ್ಯಾಕ್ಟರಿಯ ಕೊಳಚೆ ನೀರು ಮತ್ತು ಹರಿಹರದ ಒಳಚರಂಡಿ ನೀರು ತುಂಗಭದ್ರಾ ನದಿಗೆ ಸೇರುತ್ತಿದ್ದು, ಈ ಕೂಡಲೇ ಇದನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ದಾವಣೆಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಲ್ಲಿ ಮನವಿ ಮಾಡಿದರು.
ದಾವಣೆಗೆರೆಯಲ್ಲಿ ಭಾನುವಾರ ಸಂಸದರನ್ನು ಭೇಟಿ ಮಾಡಿದ ಕೋರಿಶೆಟ್ಟರ್, ಪಾಲಿಫೈಬರ್, ಹರಿಹರ ನಗರದ ಕೊಳಚೆ ನೀರು ಸೇರಿದಂತೆ ಹಲವು ಫ್ಯಾಕ್ಟರಿಗಳ ಕೊಳಚೆ ನೀರನ್ನು ಶುದ್ದೀಕರಿಸದೇ ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇದರಿಂದ ಜಲಚರಗಳಿಗೆ ಅಷ್ಟೇ ಅಲ್ಲದೇ ಇದರಿಂದ ಹಾವೇರಿ ಜಿಲ್ಲೆಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಜಿಲ್ಲೆಯ ಹಲವು ಗ್ರಾಮ, ನಗರಗಳ ಜನತೆ ಸೇವಿಸುತ್ತಿರುವ ಕಾರಣ ಇಲ್ಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನದಿಯ ಎರಡೂ ಬದಿಯ ಗ್ರಾಮಗಳ ಜನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ಕಲುಷಿತ ನೀರನ್ನು ಶುದ್ಧೀಕರಣ ಘಟಕದ ಮೂಲಕ ಶುದ್ಧಗೊಳಿಸಿದ ಬಳಿಕವೇ ನದಿಗೆ ಬಿಡುವಂತೆ ಕ್ರಮ ಜರುಗಿಸಿ ಎಂದು ಮನವಿ ಮಾಡಿದರು.
ಹರಿಹರ ನಗರಸಭೆಯವರಿಗೆ ಸೂಚಿಸಿ ಕೊಳಚೆ ನೀರು ಹರಿಸುವುದನ್ನು ತಡೆಯಲು ಸೂಚಿಸಲಾಗುವುದು ಎಂದು ಸಂಸದರು ಭರವಸೆ ನೀಡಿದರು ಎಂದು ಕೋರಿಶೆಟ್ಟರ್ ತಿಳಿಸಿದರು.
ಈ ಸಂದರ್ಭದಲ್ಲಿ ಶಂಭುಲಿಂಗಪ್ಪ ಚಕ್ಕಡಿ, ಅಭಿಷೇಕ ಉಪ್ಪಿನ, ಶಿವಲಿಂಗಸ್ವಾಮಿ ಹೊಸಮಠ, ಕೆ.ಗೌಡಪ್ಪನವರ, ಇತರರಿದ್ದರು.