ಜಿಲ್ಲೆ

ವಾಹನ ಪಾರ್ಕಿಂಗ್ ನಿಯಮ ಪಾಲನೆ ಕಡ್ಡಾಯ; ಹಾವೇರಿ ಸಂಚಾರ ಠಾಣೆ ಪಿಎಸ್ ಎನ್.ಆರ್.ಕಾಟೆ ಮಾಹಿತಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದಲ್ಲಿ ವಾಹನ ಚಾಲಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಹಾಗೂ ನಿಗದಿತ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಹಾವೇರಿ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಎನ್.ಆರ್.ಕಾಟೆ ತಿಳಿಸಿದ್ದಾರೆ.
ರಸ್ತೆಯ ಎಡ ಮತ್ತು ಬಲ ಬದಿಯಲ್ಲಿ ಸುಗಮ ಸಂಚಾರಕ್ಕೆ ಅಡೆತಡೆಯಾಗದಂತೆ ಸಾಲಾಗಿ ವಾಹನಗಳ ಪಾರ್ಕಿಂಗ್ ಮಾಡಬೇಕು. ಶಹರದ ಹಳೆಯ ಪಿ.ಬಿ. ರಸ್ತೆಯ ನ್ಯಾಯಾಲಯದ ಎದುರಿಗೆ ಹಾಗೂ ಜಿಲ್ಲಾಸ್ಪತ್ರೆ ಎದುರಿಗೆ ನಿಶ್ಯಬ್ದ ವಲಯವೆಂದು ಗುರುತಿಸಲಾಗಿದೆ. ವಾಹನಗಳನ್ನು ನೋ-ಪಾರ್ಕಿಂಗ್‌ನಲ್ಲಿ ನಿಲ್ಲಿಸಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಿ ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡೂ ಬದಿ ಪಾರ್ಕಿಂಗ್ ಸ್ಥಳ:
ನಗರದ ಹಳೆ ಪಿ.ಬಿ ರಸ್ತೆ ಸಿದ್ದಪ್ಪ ವೃತ್ತದಿಂದ ಹಿರೇಗೌಡ್ರ ಪೆಟ್ರೋಲ್ ಬಂಕ್‌ವರೆಗೆ, ಸಿದ್ದಪ್ಪ ವೃತ್ತದಿಂದ ಕಾಗಿನೆಲೆ ಕ್ರಾಸ್‌ವರೆಗೆ ಹಾಗೂ ಕಾಗಿನೆಲೆ ಕ್ರಾಸ್‌ನಿಂದ ಗುತ್ತಲ ಕ್ರಾಸ್‌ವರೆಗೆ ರಸ್ತೆಯ ಬಿಳಿ ಲೈನ್ ಮಾರ್ಕಿಂಗ್ ಒಳಗಡೆ ಎರಡು ಬದಿಯಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು.
ಒಂದು ಬದಿ ಪಾರ್ಕಿಂಗ್ ಸ್ಥಳ:
ಹಾನಗಲ್ಲ ರೋಡ್- ಸಿದ್ದಪ್ಪ ವೃತ್ತದಿಂದ ಎಪಿಎಂಸಿ ಜಾನುವಾರು ಮಾರುಕಟ್ಟೆವರೆಗೆ , ಎಂ.ಜಿ.ರೋಡ್ -ಸೂರ್ಯ ಬೇಕರಿ ಕ್ರಾಸ್‌ನಿಂದ ಜೆಪಿ ವೃತ್ತದವರೆಗೆ, ಎಂ.ಜಿ.ರೋಡ್-ಜೆ.ಪಿ.ವೃತ್ತದಿಂದ ಕಿಡ್ಡಿಸ್ ಕಾರ್ನರ್‌ವರೆಗೆ ಹಾಗೂ ಎಂ.ಜಿ.ರೋಡ್-ಕಿಡ್ಡಿಸ್ ಕಾರ್ನರ್‌ದಿಂದ ದ್ಯಾಮವ್ವನ ಪಾದಗಟ್ಟೆವರೆಗೆ 1,3,5, 7 ಹೀಗೆ ಬೆಸ ಸಂಖ್ಯೆ ದಿನಾಂಕಗಳಂದು ಎಡಭಾಗದಲ್ಲಿ ಹಾಗೂ 2, 4 ಹಾಗೂ 6 ಸಮ ಸಂಖ್ಯೆ ದಿನಾಂಕಗಳಂದು ಬಲ ಭಾಗದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮಾಡಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.