ಹಾವೇರಿ: ದಿಢೀರ್ ಶ್ರೀಮಾಂತರಾಗುವ ಆಸೆಯಿಂದ ಬೈಕ್ ಕಳ್ಳತನಕ್ಕೆ ಇಳಿದಿದ್ದ ಇಬ್ಬರು ಬೈಕ್ ಕಳ್ಳರನ್ನು ಹಾವೇರಿ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 4,65,000 ರೂ. ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ಹೊಸರಿತ್ತಿಯ ಸಚಿನ ವಿಜಯ ಸಂಕ್ಲೀಪುರ ಹಾಗೂ ಉಡಚಪ್ಪ ಶೇಖಪ್ಪ ದೀಪಾಲಿ ಬಂಧಿತ ಆರೋಪಿಗಳು.
ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಸಚಿನ ದಿಢೀರ್ ಶ್ರೀಮಂತನಾಗುವ ಉದ್ದೇಶದಿಂದ ಬೈಕ ಕಳ್ಳತನಕ್ಕೆ ಇಳಿದಿದ್ದ. ಹಾಡಹಗಲೇ ರಸ್ತೆ ಬದಿ, ಮನೆ ಎದುರು ನಿಲ್ಲಿಸಿದ್ದ ಬೈಕ್‌ಗಳನ್ನು ಸಲೀಸಾಗಿ ಎಗರಿಸುತ್ತಿದ್ದ. ಕೆಲವೊಮ್ಮೆ ರಾತ್ರಿ ಮನೆ ಎದುರು ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ. ಕದ್ದ ಬೈಕ್‌ಗಳನ್ನು ಉಡಚಪ್ಪ ಮಾರಾಟ ಮಾಡುತ್ತಿದ್ದ.
ಉತ್ತರ ಕನ್ನಡ ಜಿಲ್ಲೆ ಬಾಡ ಗ್ರಾಮದ ಬಂಗಾರಪ್ಪ ಬಡ್ನಿ ಎಂಬುವರು ಡಿ.5ರಂದು ಹಾವೇರಿ ಬಸ್ ನಿಲ್ದಾಣದ ಬ್ರಾಹ್ಮಿ ಹೋಟೆಲ್ ಎದುರು ಬೈಕ್ ನಿಲ್ಲಿಸಿದ್ದರು. ಹಾಡಹಗಲೇ ಕಳ್ಳರು ಬೈಕ್ ಕದ್ದಿದ್ದರು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಬೆನ್ನಟ್ಟಿದ ಪೊಲೀಸರು ಆರೋಪಿತರ ಹೆಡೆಮುರಿ ಕಟ್ಟಿದ್ದಾರೆ.
ಮಾಸ್ಟರ್ ಕೀ ಬಳಕೆ
ಬೈಕ್ ಕಳ್ಳತನಕ್ಕೆ ಸಚಿನ ಮಾಸ್ಟರ್ ಕೀ ಬಳಸುತ್ತಿದ್ದ. ಸಾಮಾನ್ಯವಾಗಿ ಎಲ್ಲ ವಿಧದ ಬೈಕ್‌ಗಳಿಗೆ ಸಲೀಸಾಗಿ ಹೊಂದಿಕೆಯಾಗುವಂತೆ ಕೀಲಿ ಮಾಡಿಸಿದ್ದ. ಅದೇ ಕೀಲಿ ಬಳಸಿ ಕಳ್ಳತನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೀಲಿ ಎಲ್ಲಿ ಮತ್ತು ಯಾರ ಬಳಿ ಮಾಡಿಸಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ.
ಎಸ್‌ಪಿ ಶ್ಲಾಘನೆ
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಾವೇರಿ ಶಹರ ಠಾಣೆ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ನೇತೃತ್ವದ ತಂಡವನ್ನು ಎಸ್‌ಪಿ ಅಂಶುಕುಮಾರ ಶ್ಲಾಘಿಸಿದ್ದಾರೆ. ತಂಡದಲ್ಲಿ ಪಿಎಸ್‌ಐಗಳಾದ ಪಿ.ಡಿ.ಆರೇರ, ಬಿ.ಎನ್.ಕೂಡಲ, ಸಿಬ್ಬಂದಿ ಎಂ.ಜಿ.ಎರೇಶೀಮಿ, ಎಸ್.ಜಿ.ವಡ್ನಿಕೊಪ್ಪ, ಮುತ್ತಪ್ಪ ಲಮಾಣಿ, ಎಂ.ಎಸ್.ಮೆಣಸಕ್ಕನವರ, ಚನ್ನಬಸಪ್ಪ ಆರ್.ಬಿ., ಲಿಂಗರಾಜು, ಶ್ರೀಕಾಂತ ಪೂಜಾರ, ಚಂದ್ರಕಾಂತ ಎಲ್.ಆರ್., ಮಾಲತೇಶ ಕಬ್ಬೂರ, ಸತೀಶ ಮಾರಕಟ್ಟೆ, ಮಾರುತಿ ಹಾಲಬಾವಿ ಇದ್ದರು.