ಹಾವೇರಿ: ವೇಗವಾಗಿ ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಟಂಟಂಗೆ ಡಿಕ್ಕಿ ಹೊಡೆದ ಪರಿಣಾಮ ಟಂಟಂನಲ್ಲಿದ್ದ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟ ಧಾರುಣ ಅಪಘಾತ ಹಾವೇರಿ ಹೊರವಲಯ ತೋಟದಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಮಂಗಳವಾರ ಸಂಭವಿಸಿದೆ.
ದಾವಣೆಗೆರೆ ಆಜಾದ್ ನಗರ ನಿವಾಸಿಗಳಾದ ರಫೀಕ್‌ಖಾನ್ ಉಮೇದುಲ್ಲಾಖಾನ್ (40) ಹಾಗೂ ಷಫಿಖಾನ್ ಉಮೇದುಲ್ಲಾಖಾನ್ (50) ಮೃತಪಟ್ಟವರು. ಕಾರು ಚಾಲಕ ಧಾರವಾಡ ಮುಮ್ಮಿಗಟ್ಟಿ ನಿವಾಸಿ ಬಶೀರ್‌ಸಾಬ ಬುಡನ್‌ಸಾಬ ಮಕಾನದಾರ (60) ಗಾಯಗೊಂಡಿದ್ದಾರೆ.
ರಫೀಕ್ ಹಾಗೂ ಷಫಿಖಾನ್ ಸಹೋದರರು ಹುಬ್ಬಳ್ಳಿಯಲ್ಲಿ ಚಿಕ್ಕು, ಪೇರಲ ಹಣ್ಣು ಖರೀದಿಸಿ ದಾವಣೆಗೆರೆ ಕಡೆಗೆ ಟಂಟಂನಲ್ಲಿ ಹೊರಟಿದ್ದರು. ಬಶೀರ್‌ಸಾಬ ದಾವಣಗೆರೆ ಕಡೆಯಿಂದ ಮುಮ್ಮಿಗಟ್ಟಿ ಕಡೆಗೆ ಕಾರಿನಲ್ಲಿ ಹೊರಟಿದ್ದರು. ಅತಿಯಾದ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಕಾರಣ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಮೇಲೆ ಹಾರಿ ಎದುರಿಗೆ ಬರುತ್ತಿದ್ದ ಟಂಟಂಗೆ ಡಿಕ್ಕಿ ಹೊಡೆದಿದೆ. ಟಂಟಂ ನಜ್ಜುಗುಜ್ಜಾಗಿ ಸಹೋದರರಿಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕ ಬಶೀರ್‌ಸಾಬ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಹಾವೇರಿ ಸಂಚಾರ ಠಾಣೆ ಪಿಎಸ್‌ಐ ಕಾಟೆ, ಸಿಬ್ಬಂದಿ ಧಾವಿಸಿ ಪರಿಶೀಲಿಸಿದರು. ರಸ್ತೆಯಿಂದ ವಾಹನಗಳನ್ನು ತೆರವುಗೊಳಿಸಿದರು.