ಹಾವೇರಿ: ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ನಗರದ ಯುವಕರೊಬ್ಬರು ಹಾವೇರಿಯಿಂದ ಕನ್ಯಾಕುಮಾರಿವರೆಗೂ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
ನಗರದ ಎಲ್ಐಸಿ ಹಿಂಭಾಗದ ನಿವಾಸಿ ವಿವೇಕಾನಂದ ಶಿವಬಸಪ್ಪ ಇಂಗಳಗಿ ಸೈಕಲ್ ಯಾತ್ರೆ ಹೊರಟ ಸಾಹಸಿ ಯುವಕ.
ಕಳೆದ 2021ರಲ್ಲಿ ಹಾವೇರಿಯಿಂದ ಅಯೋಧ್ಯೆ ಕೇದಾರನಾಥದವರೆಗೂ 5,540 ಕಿಲೋ ಮೀಟರ್ ಸೈಕಲ್‌ನಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಿದ್ದ ವಿವೇಕಾನಂದ ಅವರು ಇದೀಗ ಎರಡನೆಯ ಸೈಕಲ್ ಯಾತ್ರೆಯನ್ನು ಆರಂಭಿಸಿದ್ದಾರೆ. ಹಾವೇರಿಯಿಂದ ರಾಮೇಶ್ವರ, ಕನ್ಯಾಕುಮಾರಿವರೆಗೂ 25 ದಿನಗಳ ಸೈಕಲ್ ಯಾತ್ರೆಯನ್ನು ಒಬ್ಬಂಟಿಯಾಗಿ ಪೂರೈಸಲಿದ್ದಾರೆ. ವಿವೇಕಾನಂದರಿಗೆ ಓಂ ಯುವಕ ಸಂಘದಿಂದ ಸಾಧಕ ರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ವಿವೇಕಾನಂದ ಇಂಗಳಗಿ ಅವರ ಸೈಕಲ್ ಯಾತ್ರೆಗೆ ಹಾವೇರಿಯಲ್ಲಿ ಇತ್ತೀಚೆಗೆ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಹರಸೂರ ಬಣ್ಣದ ಮಠದ ಶ್ರೀ ರುದ್ರಚನ್ನಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಓಂ ಯುವಕ ಸಂಘದ ಸದಸ್ಯರಾದ ಗಣೇಶ ರಾಯ್ಕರ, ಶಿವರಾಜ ನವಲೆ, ಕಾರ್ತಿಕ ಲಂಬಿ, ಅಭಿಷೇಕ ಉಪ್ಪಿನ, ಶಂಭು ಚಕ್ಕಡಿ ,ಸಂಕೇತ ಪಾಟೀಲ, ವೀರೇಶ ಆನ್ವೇರಿ, ಜಗದೀಶ ಕೊಂಡೆಮ್ಮನವರ, ಇತರರು ಪಾಲ್ಗೊಂಡಿದ್ದರು.
ಮದ್ಯ ಪಾರ್ಸಲ್ ರದ್ದು ಮಾಡಿ
ಇಂದಿನ ಯುವಪೀಳಿಗೆ ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ಗೊಂದಲದಲ್ಲಿದೆ. ಎಲ್ಲ ಎಂ.ಎಸ್.ಐ.ಎಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಪಾರ್ಸಲ್ ರದ್ದುಗೊಳಿಸಬೇಕು. ಇದರಿಂದ ರಸ್ತೆ ಅಥವಾ ಕೃಷಿ ಚಟುವಟಿಕೆ ಪ್ರದೇಶಗಳಲ್ಲಿ ಮದ್ಯದ ಬಾಟಲಿಗಳು ಬಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಜಾನುವಾರುಗಳಿಗೆ ಗಾಜು ಚುಚ್ಚಿದರೆ ರೈತರಿಗೆ ಆರ್ಥಿಕ ಸಂಕಷ್ಟವಾಗುತ್ತದೆ. ಆದ್ದರಿಂದ ಅಬಕಾರಿ ಇಲಾಖೆಯಿಂದ ಕಠಿಣ ಕ್ರಮ ಜರುಗಿಸಬೇಕೆಂದು ವಿವೇಕಾನಂದ ಇಂಗಳಗಿ ಒತ್ತಾಯಿಸಿದ್ದಾರೆ.