ಹಾವೇರಿ: ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯ ವೀರಯೋಧರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ರಾಷ್ಟ್ರ ರಕ್ಷಣೆಗಾಗಿ ನಾವು ಹಾಗೂ ನಾಗರಿಕರು ವೇದಿಕೆ ವತಿಯಿಂದ ನಗರದಲ್ಲಿ ಮೇ 23ರಂದು ಬೆಳಗ್ಗೆ 10.30ಕ್ಕೆ ಬೃಹತ್ ತಿರಂಗಾ ಯಾತ್ರೆ ಆಯೋಜಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗವಿಸಿದ್ದಪ್ಪ ದ್ಯಾಮಣ್ಣನವರ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ 26 ಪ್ರಜೆಗಳನ್ನು ಪಾಕಿಸ್ತಾನ ಉಗ್ರರು ಹತ್ಯೆಗೈದರು. ಈ ಘಟನೆಯನ್ನು ಭಾರತ ದೇಶ ತೀವ್ರವಾಗಿ ಖಂಡಿಸಿತ್ತು. ಮೂರು ಸೇನೆಯ ಮುಖ್ಯಸ್ಥರೂ ಒಟ್ಟಿಗೆ ನಡೆಸಿದ ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಒಂಭತ್ತು ಉಗ್ರರ ಅಡಗುತಾಣಗಳನ್ನು ನಾಶಪಡಿಸಲಾಯಿತು. ಹಾಗೂ 11 ವಾಯು ನೆಲೆಗಳನ್ನು ಧ್ವಂಸ ಮಾಡುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾದರು.
ಸಾಹಸ ಮೆರೆ ಹೆಮ್ಮೆಯ ಸೈನಿಕರಿಗೆ ಗೌರವ ಕೊಡುವ ಉದ್ದೇಶಕ್ಕಾಗಿ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 10.30ಕ್ಕೆ ಪುರಸಿದ್ದೇಶ್ವರ ದೇವಸ್ಥಾನದಿಂದ ಮೈಲಾರ ಮಹದೇವಪ್ಪ ವೃತ್ತದವರೆಗೆ ಯಾತ್ರೆ ನಡೆಯಲಿದ್ದು, ಕ್ಷೇತ್ರದ ಸಾರ್ವಜನಿಕರು, ದೇಶ ಭಕ್ತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಕ್ಷಬೇಧ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ನಗರಸಭೆ ಸದಸ್ಯ ಗಿರೀಶ ತುಪ್ಪದ, ಸಂತೋಷ ಅಲದಕಟ್ಟಿ, ಕಿರಣ ಕೋಣನವರ, ಅಭಿಷೇಕ ಉಪ್ಪಿನ, ಮೃತ್ಯುಂಜಯ ಮುಷ್ಠಿ, ಇತರರು ಇದ್ದರು.
ಕಾಂಗ್ರೆಸ್‌ನವರೂ ಭಾಗವಹಿಸಬೇಕು
ಪಹಲ್ಗಾಮ್ ಘಟನೆ ಬಳಿಕ ಭಾರತೀಯ ಸೇನೆಯು 45 ಪಾಕಿಸ್ತಾನದ ಕ್ಷಿಪಣಿ, 500ಕ್ಕೂ ಅಧಿಕ ಡ್ರೋನ್‌ಗಳನ್ನು ಧ್ವಂಸ ಮಾಡಿದೆ. ಜಗತ್ತಿಗೆ ಭಾರತದ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟಿದೆ. ಸೈನಿಕರಿಗೆ ಗೌರವ ನೀಡುವ ಉದ್ದೇಶದಿಂದ ಯಾತ್ರೆ ಆಯೋಜಿಸಲಾಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ಸೇರಿದಂತೆ ಎಲ್ಲ ದೇಶಭಕ್ತರು ಭಾಗವಹಿಸಬೇಕೆಂದು ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಮನವಿ ಮಾಡಿದರು.
ಕೋಟ್
ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಹಾಗೂ ಭಾರತೀಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ತಿರಂಗಾ ಯಾತ್ರೆಯಲ್ಲಿ ಮಾಜಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.
- ತಿರಕನಗೌಡ ಎಸ್. ಪಾಟೀಲ, ಜಿಲ್ಲಾಧ್ಯಕ್ಷ, ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ