ಜಿಲ್ಲೆ

ತೃತೀಯ ಲಿಂಗಿಗಳು ಹಕ್ಕುಗಳತ್ತ ಗಮನ ಹರಿಸಲಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತೃತೀಯ ಲಿಂಗಿಗಳು ಮುಜುಗರ ಬಿಟ್ಟು ತಮ್ಮ ಹಕ್ಕುಗಳತ್ತ ಗಮನ ಹರಿಸಬೇಕು ಎಂದು ರೋಶನಿ ಸಂಸ್ಥೆಯ ಸಹ ನಿರ್ದೇಶಕಿ ಶಾಂತಿ ಡಿಸೋಜಾ ಸಲಹೆ ನೀಡಿದರು.
ಸಂಜೀವಿನಿ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆ ಹಾಗೂ ಹಾನಗಲ್ಲನ ರೋಶನಿ ಟ್ರಸ್ಟ್ ಸಹಯೋಗದಲ್ಲಿ ನಗರದ ಸಂಜೀವಿನಿ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಬದುಕು ಬವಣೆ’ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಸಮ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಗುರಿ ಎಂದರು.
ಡಾ.ಎಂ.ಎಚ್. ಹೆಬ್ಬಾಳ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರರು ಎದುರಿಸುತ್ತಿರುವ ಸವಾಲುಗಳು ಮತ್ತು ವ್ಯವಸ್ಥೆಯಲ್ಲಿ ಸಮುದಾಯದ ಕುರಿತು ಮಾತನಾಡಿದರು.
ಸಂಜೀವಿನಿ ಸಂಸ್ಥೆಯ ಅಧ್ಯಕ್ಷೆ ಅಕ್ಷತಾ ಕೆ.ಸಿ. ಮಾತನಾಡಿ, ನಾವೆಲ್ಲರೂ ಮನುಷ್ಯರು. ಮನುಷ್ಯರಿಗೆ ಇರುವ ಹಕ್ಕುಗಳೆಲ್ಲ ನಮಗೂ ದೊರಕಬೇಕು. ಅವುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ದಾಂತ ಮತ್ತು ಸಂವಿಧಾನದ ಅಡಿಯಲ್ಲಿ ಹೆಜ್ಜೆ ಹಾಕೋಣ ಎಂದರು.
ಈ ಸಂದರ್ಭದಲ್ಲಿ ರೋಶನಿ ಸಂಸ್ಥೆಯ ಶಿವಕುಮಾರ, ದಿಗ್ಗಪ್ಪ ಲಮಾಣಿ. ಸಂಜೀವಿನಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಇತರರಿದ್ದರು.